ಅದಾನಿ ವಿರುದ್ಧ ಹಿಂಡೆನ್‌ಬರ್ಗ್‌ ವರದಿ : ತಜ್ಞರ ಸಮಿತಿ ವರದಿ ಸ್ವೀಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಉದ್ಯಮಿ ಗೌತಮ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಗೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಲು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮೂರು ತಿಂಗಳು ಮಾತ್ರ ಕಾಲಾವಕಾಶ ನೀಡಲು ಸಾಧ್ಯ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ.
ತನಿಖಾ ವರದಿ ಸಲ್ಲಿಸಲು ಆರು ತಿಂಗಳು ಕಾಲಾವಕಾಶ ನೀಡುವಂತೆ ಕೋರಿ ಸೆಬಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತು.
ಆರು ತಿಂಗಳು ಕಾಲಾವಕಾಶ ನೀಡಲಾಗದು. ತಂಡವಾಗಿ ಕಾರ್ಯನಿರ್ವಹಿಸಿ. ಆಗಸ್ಟ್‌ ಮಧ್ಯದಲ್ಲಿ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಲಾಗುವುದು. ಆ ವೇಳೆಗೆ ವರದಿ ಸಲ್ಲಿಸಿ… ಕನಿಷ್ಠ ಸಮಯವಾಗಿ ಆರು ತಿಂಗಳು ನೀಡಲಾಗದು. ನಾವು ಸೆಬಿಗೆ ಮೂರು ತಿಂಗಳು ಮಾತ್ರ ಸಮಯ ನೀಡುತ್ತೇವೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.
ಮೇ 15ರಂದು ಕಾಲಾವಕಾಶ ವಿಸ್ತರಣೆ ಕೋರಿ ಸೆಬಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆದೇಶ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ಅವರ ನೇತೃತ್ವದ ತಜ್ಞರ ಸಮಿತಿ ಸಲ್ಲಿಸಿರುವ ತನಿಖಾ ವರದಿಯನ್ನು ಸ್ವೀಕರಿಸಿರುವುದಾಗಿ ನ್ಯಾಯಾಲಯ ಹೇಳಿದೆ.
ನ್ಯಾ. ಸಪ್ರೆ ಅವರ ನೇತೃತ್ವದ ಸಮಿತಿ ಸಲ್ಲಿಸಿರುವ ತನಿಖಾ ವರದಿಯನ್ನು ರೆಜಿಸ್ಟ್ರಿಯು ಸ್ವೀಕರಿಸಿದೆ. ವಾರಾಂತ್ಯಕ್ಕೆ ಆ ವರದಿಯನ್ನು ನಾವು ಪರಿಶೀಲಿಸುತ್ತೇವೆ.. ಸೋಮವಾರಕ್ಕೆ ವಿಚಾರಣೆ ನಿಗದಿಪಡಿಸಲಾಗುವುದು. ಕಾಲಾವಕಾಶ ಕೋರಿರುವ ನಿಮ್ಮ ಅರ್ಜಿಗೆ ಸಂಬಂಧಿಸಿದಂತೆ ಸೋಮವಾರ ಆದೇಶ ಪ್ರಕಟಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.

ಪ್ರಮುಖ ಸುದ್ದಿ :-   ಖ್ಯಾತ ಕಾನೂನು ಪಟು ಫಾಲಿ ಎಸ್ ನಾರಿಮನ್ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement