ರಾಜ್ಯ ವಿಧಾನಸಭೆ ಚುನಾವಣೆ : ಹಳೆ ಮೈಸೂರು ಭಾಗದಲ್ಲಿ ಅಬ್ಬರಿಸಿದ ಕಾಂಗ್ರೆಸ್‌, ಮಂಕಾದ ಜೆಡಿಎಸ್‌

ಬೆಂಗಳೂರು: ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಮತ್ತು ಬೆಂಗಳೂರು ಭಾಗದ 11 ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿಸಿಕೊಂಡಿದ್ದು, ಜೆಡಿಎಸ್‌ ಬಲ ಗಣನೀತವಾಗಿ ಕುಸಿದಿದೆ. 2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ 14 ಸ್ಥಾನಗಳನ್ನು ಹೆಚ್ಚು ಪಡೆದಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಬೆಂಗಳೂರು ನಗರದಲ್ಲಿ ಮಾತ್ರ ಕಾಂಗ್ರೆಸ್‌ ಹಿಂದಿನ ಸಲಕ್ಕಿಂತ ಎರಡು ಸ್ಥಾನ ಕಡಿಮೆ ಪಡೆದಿದೆ.
ಒಕ್ಕಲಿಗ ಮತದಾರರ ಪ್ರಾಬಲ್ಯವಿರುವ ಈ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಸಾಧನೆ ಬಹುತೇಕ ದ್ವಿಗುಣಗೊಂಡಿದೆ. ಫಳಿತಾಂಶ ನೋಡಿದರೆ ದೇವೇಗೌಡ ಮತ್ತು ಎಚ್‌ ಡಿ ಕುಮಾರಸ್ವಾಮಿ ರಾಜಕೀಯವಾಗಿ ಬಿಗಿ ಹಿಡಿತ ಹೊಂದಿದ್ದ ಈ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದ್ದು, ಒಕ್ಕಲಿಗ ನಾಯಕತ್ವವನ್ನು ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಮಾಡಿದ ಮನವಿ ಹೆಚ್ಚು ಕೆಲಸ ಮಾಡಿದಂತೆ ಕಾಣುತ್ತಿದೆ.
2018ರ ಚುನಾವಣೆಯಲ್ಲಿ 11 ಜಿಲ್ಲೆಗಳ 89 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 34 ಮತ್ತು ಜೆಡಿಎಸ್‌ 31 ಹಾಗೂ ಬಿಜೆಪಿ 22 ಸ್ಥಾನಗಳನ್ನು ಗಳಿಸಿದ್ದವು. ಈ ಸಲ ಕಾಂಗ್ರೆಸ್‌ 52 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಡಿಎಸ್‌ ಬಲ 14ಕ್ಕೆ ಕುಸಿದಿದ್ದು, ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ಒಂದು ಸ್ಥಾನವನ್ನಷ್ಟೇ ಕಡಿಮೆ ಪಡೆದಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

ಜೆಡಿಎಸ್‌ನ ಭದ್ರ ಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಐದು ಸ್ಥಾನಗಳನ್ನು ಗೆದ್ದಿದೆ. ಅಲ್ಲದೆ ಮೇಲುಕೋಟೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಗಳಲ್ಲಿ ಏಳಕ್ಕೆ ಏಳು ಕ್ಷೇತ್ರಗಳನ್ನು ಗೆದ್ದು ಬೀಗಿದ್ದ ಜೆಡಿಎಸ್‌ ಈ ಬಾರಿ ಕೇವಲ ಒಂದು ಸ್ಥಾನಕ್ಕೆ ಕುಸಿದಿದೆ.
ಮೈಸೂರು ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಐದು ಸ್ಥಾನಗಳನ್ನು ಹೆಚ್ಚು ಪಡೆದಿದೆ. ಬಿಜೆಪಿ ಎರಡು ಸ್ಥಾನ ಕಳೆದುಕೊಂಡಿದ್ದರೆ, ಜೆಡಿಎಸ್‌ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿಯ ಭದ್ರ ನೆಲೆ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಗೆದ್ದಿದೆ. ತುಮಕೂರಿನಲ್ಲಿ ಕಾಂಗ್ರೆಸ್‌ ನಾಲ್ಕು ಸ್ಥಾನ ಹಾಗೂ ಹಾಸನ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ ಒಂದು ಕ್ಷೇತ್ರಗಳು ಕಾಂಗ್ರೆಸ್‌ ಹೆಚ್ಚು ಪಡೆದಿದೆ. ಬೆಂಗಳೂರು ನಗರದಲ್ಲಿ ಜೆಡಿಎಸ್‌ ಬಲ ಶೂನ್ಯಕ್ಕೆ ಇಳಿದಿದ್ದು, ಉಳಿದಂತೆ ಹೆಚ್ಚೇನೂ ಬದಲಾವಣೆಗಳಾಗಿಲ್ಲ. ಬಹುತೇಕ ಹಾಲಿ ಶಾಸಕರು ಗೆದ್ದು ಬಂದಿದ್ದಾರೆ. ರಾಮನಗರದಲ್ಲಿ ಜೆಡಿಎಸ್‌ನ ಕೋಟೆ ಕುಸಿದಿದ್ದು, ಕಾಂಗ್ರೆಸ್‌ ಸಂಪೂರ್ಣ ಮೇಲುಗೈ ಪಡೆದಿದೆ.‌ ವಿಶೇಷವಾಗಿ ಜೆಡಿಎಸ್‌ನ ಮತಗಳು ಈ ಬಾರಿ ಕಾಂಗ್ರೆಸ್‌ನತ್ತ ಹೋಗಿರುವುದರಿಂದ ಜೆಡಿಎಸ್‌ ಕುಸಿದಿದೆ, ಜೊತೆಗೆ ಬಿಜೆಪಿಯೂ ಕೊಡಗಿನಂತಹ ತನ್ನ ಭದ್ರ ಕೋಡೆಯನ್ನೂ ಕಳೆದುಕೊಳ್ಳುವಂತೆ ಮಾಡಿದೆ. ಆದರೆ ಹಾಸನ ಹಾಗೂ ಮಂಡ್ಯದಲ್ಲಿ ಜೆಡಿಎಸ್‌ ಮತಗಳ ಕುಸಿತದ ಜೊತೆಗೆ ಬಿಜೆಪಿ ಮತಗಳು ಹೆಚ್ಚಾಗಿದ್ದು ಸಹ ಕಾಂಗ್ರೆಸ್ಸೇತರ ಮತಗಳ ಒಡಕಿನ ಲಾಭ ಕಾಂಗ್ರೆಸ್ಸಿಗೆ ಭರಪೂರ ಸಿಗುವಂತೆ ಮಾಡಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಸಿಎಂ ಸಿದ್ದರಾಮಯ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement