ʼಚುನಾವಣಾ ರಾಜಕೀಯ’ಕ್ಕೆ ನಿವೃತ್ತಿ ಘೋಷಿಸಿದ ವೈಎಸ್‌ವಿ ದತ್ತ : ಕಡೂರಿನಲ್ಲಿ ಪಶ್ಚಾತ್ತಾಪದ ಪಾದಯಾತ್ರೆ

ಚಿಕ್ಕಮಗಳೂರು: ಕೆಲದಿನಗಳ ಹಿಂದೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತ ನಂತರ ಜೆಡಿಎಸ್​ನ ವೈಎಸ್​ವಿ ದತ್ತ (YSV Datta) ಅವರು ಈಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಗೂ ಚನಾವಣೆ ಸಮಯದಲ್ಲಿ ನಡೆದ ಬೆಳವಣಿಗೆಯಿಂದ ಪಶ್ಚಾತ್ತಾಪ ಪಟ್ಟಿರುವ ಅವರು ಕ್ಷೇತ್ರದಲ್ಲಿ ಪಶ್ಚಾತ್ತಾಪ ಪಾದಯಾತ್ರೆ ಕೈಗೊಂಡು ಜನರಲ್ಲಿ ಕ್ಷಮೆ ಕೋರಲು ನಿರ್ಧರಿಸಿದ್ದಾರೆ.
ವಿಧಾನಸಭಾ ಚುನಾವಣೆಗೂ ಮೊದಲು ಅವರು ಕಾಂಗ್ರೆಸ್ ಪಕ್ಷ ಸೇರಿ, ಅಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಕೊನೆಯ ಕ್ಷಣದಲ್ಲಿ ಪುನಃ ಜೆಡಿಎಸ್ ಸೇರಿಕಡೂರು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಮತದಾರರು ಅವರ ಕೈ ಹಿಡಿಯಲಿಲ್ಲ. ಚುನಾವಣೆಯಲ್ಲಿ ಸೋಲುಂಡಿದ್ದ ಅವರು, ಈಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಸುದೀರ್ಘ ಪತ್ರ ಬರೆದಿರುವ ಅವರು, ಜೂನ್ 24ರಂದು ಪಶ್ಚಾತ್ತಾಪದ ಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ. ಪತ್ರದಲ್ಲಿ ಅವರು ತಮ್ಮ ಮನದಾಳದ ಮಾತುಗಳನ್ನು ತೋಡಿಕೊಂಡಿದ್ದಾರೆ. ಪತ್ರದಲ್ಲಿ ಅವರು, 2023ರ ಮಹಾ ಚುನಾವಣೆ ಅತ್ಯಂತ ಶಾಂತಿಯುತವಾಗಿ ಸಂಪನ್ನವಾಗಿದೆ. ಕಳೆದ ಮೂವತ್ತು ದಿನದಿಂದ ನಿಮ್ಮ ಮನೆಗಳಿಗೆ ಹಾಗೂ ಗ್ರಾಮಗಳಿಗೆ ಮತ ಕೇಳಲು ನಾನು ಬಂದ ಸಂದರ್ಭದಲ್ಲಿ ನೀವು ತೋರಿದ ಪ್ರೀತಿ, ವಿಶ್ವಾಸ, ಆತಿಥ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಜೀವಮಾನವಿಡೀ ನಿಮ್ಮ ಋಣ ತೀರಿಸಲು ನನ್ನಿಂದ ಸಾಧ್ಯವಿಲ್ಲವೇನೋ ಎಂಬ ಭಾವನೆ ನನ್ನಲ್ಲಿ ಮೂಡಿದೆ. ನಾನು ನಿಮ್ಮಲ್ಲಿಗೆ ಬಂದ ಸಂದರ್ಭದಲ್ಲಿ ನನಗೆ ನಿಮ್ಮಿಂದ ಬಂದ ಪ್ರತಿಸ್ಪಂದನೆಯ ಕಾರಣದಿಂದ 2023ರ ಚುನಾವಣೆಗೆ ನನ್ನ ಪಾಲಿಗೆ ಅವಿಸ್ಮರಣೀಯ ಚುನಾವಣೆ ಆಗಬಹುದೆಂಬ ಅಶಾ ಭಾವನೆ ಮೂಡಿತ್ತು. ಅದೂ ಅಲ್ಲದೇ ಇದೇ ನನ್ನ ಕಡೆಯ ಚುನಾವಣೆ ಎಂಬುದನ್ನೂ ತಮ್ಮಲ್ಲಿ ತಿಳಿಸಿದ್ದೆ. ಆದರೆ, ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಮೇಲೆ ನನಗೆ ವಾಸ್ತವ ದರ್ಶನವಾಯಿತು ಎಂದು ತಮ್ಮ ಸೋಲಿನ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

2006ರಲ್ಲಿ ನಾನು ಕಡೂರು ಕ್ಷೇತ್ರಕ್ಕೆ ಅನಿವಾರ್ಯವಾಗಿ ಬಂದ ದಿನದಿಂದ 2023ರ ವರೆಗೂ ನನ್ನ ನಡವಳಿಕೆ, ನಿರ್ಧಾರ ಹಾಗೂ ಮತದಾರನೊಂದಿಗಿನ ಸಂಬಂಧದ ಬಗ್ಗೆ ನಾನೇ ಎಲ್ಲೋ ಎಡವಿದ್ದೇನೆ ಎಂಬ ಅನುಮಾನ ಕಾಡತೊಡಗಿದೆ. ಚುನಾವಣಾ ಫಲಿತಾಂಶದ ಬಗ್ಗೆ ನಾನು ಎಂದಿಗೂ ತಲೆಕೆಡಿಸಿಕೊಂಡವನಲ್ಲ. ನನ್ನ ರಾಜಕೀಯ ಜೀವನದಲ್ಲಿ ನಾನು ಗೆಲುವಿಗಿಂತ ಸೋಲನ್ನೇ ಜಾಸ್ತಿ ನೋಡಿದ್ದೇನೆ. ಎರಡನ್ನು ಸಮಾನಾವಾಗಿ ಸ್ವೀಕರಿಸುವ ಮನೋಭಾವ ನನ್ನದು. ಹೀಗಾಗಿ ಬಂದ ಫಲಿತಾಂಶದ ಬಗ್ಗೆ ನನಗೆ ಎಳ್ಳಷ್ಟು ಬೇಸರವಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ನಾನೀಗ ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ ಚುನಾವಣೆಯಲ್ಲಿ ನಾನು ಎಲ್ಲಿ ಎಡವಿದೆ, ಮತದಾರ ಬಂಧುಗಳಾದ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ಎಲ್ಲಿ ವಿಫಲನಾಗಿದ್ದೇನೆ ಎಂಬುದರ ಕುರಿತು ಚಿಂತನ-ಮಂಥನ ಮಾಡುತ್ತಿದ್ದೇನೆ. ಈ ಸೋಲು ನನ್ನ ಉತ್ಸಾಹ ಕಡಿಮೆ ಮಾಡಿಲ್ಲ. ಆದರೂ ಚುನಾವಣಾ ರಾಜಕೀಯದಿಂದ ಹೊರನಡೆಯಲು ತೀರ್ಮಾನಿಸಿದ್ದೇನೆ. ಆದರೆ, ಸಕ್ರಿಯ ರಾಜಕರಾಣದಿಂದ ದುರ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಾಯಶ್ಚಿತ ಪಾದಯಾತ್ರೆ ಮಾಡ್ತೇನೆ…
17 ವರ್ಷಗಳಿಂದ ನೀವು ತೋರಿರುವ ಪ್ರೀತಿ, ಅಭಿಮಾನದ ಕಾರಣಕ್ಕಾಗಿ ನಿಮ್ಮ ಋಣ ತೀರಿಸುವ ಹಾಗೂ ನನ್ನ ಕೊನೆಯ ಉಸಿರಿರುವವರೆಗೂ ನಿಮ್ಮೊಂದಿಗೆ ಇದ್ದು ಈ ನೆಲದಲ್ಲಿಯೇ ಮಣ್ಣಾಗಬೇಕು ಎಂಬ ದೃಢ ಸಂಕಲ್ಪ ಮಾಡಿದ್ದೇನೆ. ಈ ನಿಟ್ಟಿನಲ್ಲಿ ನಾನೊಂದು ನಿರ್ಧಾರಕ್ಕೆ ಬಂದಿದ್ದು ಜೂನ್​ 24ರಂದು ನನ್ನ 70ನೇ ಜನ್ಮದಿನ. ಈ ದಿನ ಪಾದಯಾತ್ರೆಯನ್ನು ಆರಂಭಿಸಿ ನಿಮ್ಮ ನಿಮ್ಮ ಊರುಗಳಿಗೆ ಬಂದು ನಾನು ನನ್ನ ತಪ್ಪುಗಳನ್ನು ನಿಮ್ಮ ಬಳಿ ನಿವೇದಿಸಿಕೊಂಡು ನಿಮ್ಮ ಕ್ಷಮೆ ಕೇಳುವ ಸಲುವಾಗಿ ಪ್ರಾಯಶ್ಚಿತ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಪ್ರಾಯಶ್ಚಿತ ಪಾದಯಾತ್ರೆ ಎಂಬ ಹೆಸರಿನಲ್ಲಿ ನಾನು ನಿಮ್ಮಲ್ಲಿಗೆ ಬರುತ್ತಿದ್ದೇನೆ. ಜೂನ್​ ಮೊದಲನೇ ವಾರ ಪಾದಯಾತ್ರೆಯ ಪ್ರವಾಸದ ವಿವರವನ್ನು ನಿಮಗೆ ತಲುಪಿಸುತ್ತೇನೆ ಎಂದು ವೈಎಸ್​.ವಿ ದತ್ತಾ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement