ಅಚ್ಚುಮೆಚ್ಚಿನ ಗ್ರಂಥಪಾಲಕ ಡಾ.ಬಸವರಾಜ ಕನ್ನಪ್ಪನವರ ಸರ್‌ ಗೆ ಇಂದು ಹೃದಯಸ್ಪರ್ಶಿ ಸನ್ಮಾನ- ಅಭಿನಂದನಾ ಗ್ರಂಥ ಲೋಕಾರ್ಪಣೆ

 (ಮೇ ೨೦ ರಂದು ಮಧ್ಯಾಹ್ನ ೩: ೩೦ಕ್ಕೆ ಸಹ್ಯಾದ್ರಿ ಕಲಾ ಮಹಾವಿದ್ಯಾಲಯದ ಸಭಾಗಂಣದಲ್ಲಿ ಗ್ರಂಥಪಾಲಕ ಡಾ. ಬಿ. ಯು. ಕನ್ನಪ್ಪನವರ ಅಭಿನಂದನಾ ಗ್ರಂಥ “ಎಮರ್ಜಿಂಗ್‌ ಟೆಕ್ನಾಲಜಿ ಆ್ಯಂಡ್ ಇಟ್ಸ್ ಇಂಪಾಕ್ಟ್, ಆನ್ ಕಾಲೇಜು ಲೈಬ್ರರಿಸ್” ಅಭಿನಂದನಾ ಗ್ರಂಥ ಲೋಕಾರ್ಪಣೆ ಮತ್ತು ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ )
ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಮಾಸೂರ ಗ್ರಾಮದ ಡಾ. ಬಸವರಾಜ ಉಜ್ಜಪ್ಪ ಕನ್ನಪ್ಪನವರ ಅವರು ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಕನ್ನಪ್ಪನವರ ಸರ್ ಎಂದೇ ಚಿರಪರಿಚಿತರು.
೬೨ನೇ ವಯಸ್ಸಿನ (ಜನನ ೨೧.೦೪.೧೯೬೧) ಕನ್ನಪ್ಪನವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾಸೂರ ಗ್ರಾಮದಲ್ಲಿ ಮುಗಿಸಿ, ಪಿ.ಯು.ಸಿ. ಬಿ.ಎ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಧಾರವಾಡದಲ್ಲಿ ಪಡೆದಿದ್ದಾರೆ. ೧೯೯೧ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸೈಟೇಶನ್ ಎನಾಲೈಸಿಸ್ ಆಫ್ ಡಾಕ್ಟರಲ್ ಡಿಜರ್‌ಟೇಶನ್ ಇನ್ ಲೈಬ್ರರಿ ಆ್ಯಂಡ್‌ ಇನ್ಫಾರ್ಮೇಶನ್ ಸೈನ್ಸ್ ಎಕ್ಸಪ್‌ಟೆಡ್ ಯುರ್ನಿವರ್ಸಿಟಿಸ್ ಇನ್ ಕರ್ನಾಟಕ” ವಿಷಯದ ಮೇಲೆ ಡಾ. ಎಸ್. ಆರ್. ಇಜಾರಿ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯ ವ್ಯಕ್ತಿಯೊಬ್ಬರು, ಧಾರವಾಡ ಜಿಲ್ಲೆಯಲ್ಲಿ ಶಿಕ್ಷಣವನ್ನು ಪಡೆದುಕೊಂಡು, ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪ್ರಗತಿ ಕೈಜೋಡಿಸಿದ್ದಾರೆ.
ಸವಣೂರಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ೧೪.೦೧.೧೯೮೯ ರಲ್ಲಿ ಗ್ರಂಥಪಾಲಕರಾಗಿ ಸೇವೆಯನ್ನು ಆರಂಭಿಸಿದ ಶ್ರೀಯುತರು ಕುವೆಂಪು ವಿಶ್ವವಿದ್ಯಾಲಯದ ಸಹಾಯಕ ಗ್ರಂಥಪಾಲಕರಾಗಿ, ದಾವಣಗೆರೆಯ ಯು.ಬಿ.ಡಿ.ಟಿ. ಕಾಲೇಜ ಆಫ್‌ ಇಂಜಿನಿಯರಿಂಗ್ ನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದು, ಸಹ್ಯಾದ್ರಿ ಕಲಾ ಮಹಾವಿದ್ಯಾಲಯದ ಗ್ರಂಥಪಾಲಕರಾಗಿ ೩೦.೦೪.೨೦೨೩ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಡಾ. ಕನ್ನಪ್ಪನವರ ಮಾರ್ಗದರ್ಶನದಲ್ಲಿ ೧೩ ಸಂಶೋಧನಾ ವಿದ್ಯಾರ್ಥಿಗಳು ಈಗಾಗಲೇ ಪಿ.ಎಚ್.ಡಿ. ಪದವಿಗಳನ್ನು ಪಡೆದುಕೊಂಡಿದ್ದು, ಐವರು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ೭ ವಿದ್ಯಾರ್ಥಿಗಳು ಎಂ.ಫಿಲ್ ಅಧ್ಯಯನವನ್ನು ಮುಗಿಸಿದ್ದಾರೆ.೨೫ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಕಾಲೇಜು ಗ್ರಂಥಪಾಲಕರ ಮಾರ್ಗದರ್ಶನದಲ್ಲಿ ಆಗಿರುವುದು ಒಂದು ಹೊಸ ದಾಖಲೆ.

ಪ್ರಮುಖ ಸುದ್ದಿ :-   ಕುಮಟಾ : ಜೂನ್‌ 21ರಂದು ವಿಶ್ವ ಸಂಗೀತ ದಿನಾಚರಣೆ ವಿಶೇಷ ಕಾರ್ಯಕ್ರಮ

ಗ್ರಂಥಾಲಯ ಒಂದು ಚಿಂತನ ಗ್ರಂಥ ಪ್ರಕಟವಾಗಿದ್ದು, ಇತರರೊಂದಿಗೆ ಇನ್‌ರ್ಫಾಮೇಶನ್ ಪ್ರೋಸೆಸಿಂಗ್ , ಅಕ್ಯಾಡಿಮಿಕ್ ಲೈಬ್ರರಿ ಸಿಸ್ಟಮ್ ಆ್ಯಂಡ್ ಸರ್ವಿಸಿಸ್ ಗ್ರಂಥಗಳು ಪ್ರಕಟವಾಗಿದೆ. ೨೫ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಲೇಖನಗಳನ್ನು ವಿವಿಧ ಗ್ರಂಥಗಳಲ್ಲಿ ಪ್ರಕಟವಾಗಿವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ೬೦ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಸಾದರ ಪಡಿಸಿದ್ದಾರೆ.
ಕರ್ನಾಟಕ ಗ್ರಂಥಾಲಯ, ಐ.ಎಲ್.ಎ. ಬುಲೆಟಿನ್ ಜರ್ನಲ್ ಆಫ್ ಲೈಬ್ರರಿ ಸಾಯಿನ್ಸ್, ಲಕ್ನೋ ಲೈಬ್ರರಿಯನ್ ಇಂಡಿಯನ್ ಜರ್ನಲ್ ಆಫ್ ಇರ್ನಪಾಮೇಶನ್, ಲೈಬ್ರರಿ ಆ್ಯಂಡ್ ಸೊಸೈಟಿ ಮುಂತಾದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ನಿಯತಕಾಲಿಕೆಗಳಲ್ಲಿ ೬೩ ಕ್ಕೂ ಹೆಚ್ಚಿನ ಲೇಖನಗಳು ಪ್ರಕಟವಾಗಿವೆ.
ಸಾರ್ವಜನಿಕ ಗ್ರಂಥಾಲಯ, ಗ್ರಾಮೀಣ ಗ್ರಂಥಾಲಯಗಳು, ಮಾಹಿತಿ ಸಂವಹನ ಕೌಶಲ್ಯ, ಪುಸ್ತಕಗಳ ಉಗಮ ಮತ್ತು ಇತಿಹಾಸ, ಶೈಕ್ಷಣಿಕ ಗ್ರಂಥಾಲಯಗಳ ಮೇಲೆ ಇಂಟರ್‌ನೆಟ್ ಪ್ರಭಾವ ಮುಂತಾದ ವಿಷಯಗಳ ಮೇಲೆ ಲೇಖನಗಳನ್ನು ಬರೆದು ಎಲ್ಲರಲ್ಲಿ ಓದುವ ಹವ್ಯಾಸ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾಗಿ ಹಲವಾರು ಕಾಲೇಜು, ಸಂಘ ಸಂಸ್ಥೆಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ಹಲವಾರು ವೃತ್ತಿಪರ ಸಂಘಟನೆಗಳ ಸದಸ್ಯರಾಗಿರುವ ಕನ್ನಪ್ಪನವರ ಕುವೆಂಪು ವಿಶ್ವವಿದ್ಯಾಲಯ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ರಾಜ್ಯಮಟ್ಟದ ಗ್ರಂಥಾಲಯ ಸೇವಾ ಪುರಸ್ಕೃತ ಪ್ರಶಸ್ತಿಗಳು ಸಂದಿವೆ.
ಉತ್ತಮ ಪುಸ್ತಕಗಳು ಸುಲಭ ಮತ್ತು ರಿಯಾಯತಿ ದರದಲ್ಲಿ ಓದುಗರಿಗೆ ದೊರೆಯಬೇಕು, ಶೈಕ್ಷಣಿಕ ಮತ್ತು ಸಾರ್ವಜನಿಕ ಗ್ರಂಥಾಲಯಗಳು ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಬೇಕು. ಈ ಗ್ರಂಥಗಳು, ಪತ್ರಿಕೆಗಳು, ಜರ್ನಲ್‌ಗಳು, ಉಪಯುಕ್ತ ಮಾಹಿತಿಗಳು ಎಲ್ಲರಿಗೂ ದೊರೆತು, ಕರ್ನಾಟಕ ರಾಜ್ಯ ಇತರ ರಾಜ್ಯಗಳಿಗೆ ಮಾದರಿಯಾಗಬೇಕೆನ್ನುತ್ತಾರೆ ಕನ್ನಪ್ಪನವರ ಅವರು.
ಶೈಕ್ಷಣಿಕ ಮತ್ತು ಸಾರ್ವಜನಿಕ ಗ್ರಂಥಾಲಯಗಳ ಬೆಳವಣಿಗೆ ವಿಶೇಷ ಆಸಕ್ತಿಯಲ್ಲಿ ಹೊಂದಿರುವ ಕನ್ನಪ್ಪನವರ ಅವರು ಗ್ರಂಥಾಲಯಗಳು ಗಣಕೀಕರಣ ಮತ್ತು ನೆಟ್‌ವರ್ಕಿಂಗ್ ಮೂಲಕ ಉತ್ತಮ ಸೇವೆ ನೀಡಲು ಸಾಧ್ಯ ಎಂಬುದನ್ನು ತಮ್ಮ ಅನುಭವದಿಂದ ಹೇಳುತ್ತಾರೆ.
ತಂದೆ ಉಜ್ಜಪ್ಪ, ತಾಯಿ ಸುಶಿಲಮ್ಮ, ಪತ್ನಿ ಸೌಭಾಗ್ಯ, ಮಗಳು ಸೌಜನ್ಯ, ಮಗ ಆಕಾಶ, ಪ್ರಾಚಾರ್ಯರು, ಸಹೋದ್ಯೊಗಿಗಳು, ಸ್ನೇಹಿತರು, ಬಂಧುಗಳು ಮತ್ತು ಹಿತೈಷಿಗಳಿಂದಾಗಿ, ರಚನಾತ್ಮಕ ಕಾರ‍್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಸೌಜನ್ಯದಿಂದ ನೆನೆಯುತ್ತಾರೆ ಡಾ. ಕನ್ನಪ್ಪನವರ.

ಪ್ರಮುಖ ಸುದ್ದಿ :-   ಕುಮಟಾ : ಜೂನ್‌ 21ರಂದು ವಿಶ್ವ ಸಂಗೀತ ದಿನಾಚರಣೆ ವಿಶೇಷ ಕಾರ್ಯಕ್ರಮ

ಅಭಿನಂದನಾ ಗ್ರಂಥ ಲೋಕಾರ್ಪಣೆ-ಸನ್ಮಾನ ಕಾರ್ಯಕ್ರಮ
ಡಾ. ಬಿ. ಯು. ಕನ್ನಪ್ಪನವರ ಅಭಿನಂದನಾ ಸಮಿತಿ, ಕುವೆಂಪು ವಿಶ್ವವಿದ್ಯಾಲಯದ ಕಾಲೇಜು ಗ್ರಂಥಪಾಲಕರ ಸಂಘ, ಕುವೆಂಪು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕೋತ್ತರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಮತ್ತು ಅವರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಬಿ.ಪಿ. ವೀರಭದ್ರಪ್ಪ ಮುಖ್ಯ ಅತಿಥಿಗಳಾಗಿ, ದಾವಣಗೆರಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಡಿ. ಕುಂಬಾರ, ಬೀದರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಬಿ. ಎಸ್. ಬಿರಾದಾರ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಾಚಾರ್ಯ ಪ್ರೊ. ಕೆ.ಬಿ. ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು ಹುಬ್ಬಳ್ಳಿ

 

 

 

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement