ಕುಖ್ಯಾತ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ; ಕಾಡಿನಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆ

ಬೆಂಗಳೂರು: ನಟೋರಿಯಸ್​ ರೌಡಿಶೀಟರ್ ಸುರೇಶಬಾಬು ಅಲಿಯಾಸ್​ ಅಲ್ಯೂಮಿನಿಯಂ ಬಾಬುವಿನ ಬರ್ಬರ ಹತ್ಯೆಯಾಗಿದ್ದು, ಆತನ ಶವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ.
ನಿನ್ನೆ ಶನಿವಾರ (ಮೇ 20) ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಅಲ್ಯೂಮಿನಿಯಂ ಬಾಬು ಜಯನಗರ ಪೊಲೀಸ್​ ಠಾಣೆಯ ರೌಡಿಶೀಟರ್ ಆಗಿದ್ದ. ಕೊಲೆ, ಸುಲಿಗೆ, ಬೆದರಿಕೆ ಹಾಗೂ ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬಾಬು ಭಾಗಿಯಾಗಿದ್ದ. ಆತ ಇತ್ತೀಚೆಗೆ ಬೆಂಗಳೂರಿನಿಂದ ತಮಿಳುನಾಡಿಗೆ ವಾಸ್ತವ್ಯ ಬದಲಿಸಿದ್ದ. ಇದೀಗ ಕೃಷ್ಣಗಿರಿ ತಾಲೂಕಿನ ಡೆಂಕಣಕೋಟೆ ಅರಣ್ಯ ಪ್ರದೇಶದಲ್ಲಿ ಆತನ ಶವ ಪತ್ತೆಯಾಗಿದೆ.
ಈತನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡಿನ ಡೆಂಕಣಕೋಟೆ ಕಾಡಿನಲ್ಲಿ, ಪ್ಲಾಸ್ಟಿಕ್ ಚೀಲದಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಹತ್ಯೆ ನಡೆಸಿದ ಬಳಿಕ ಶವವನ್ನು ಕಾಡಿನಲ್ಲಿ ಎಸೆದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ತಮಿಳುನಾಡಿನ ತಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement