ರಾಜ್ಯದಲ್ಲಿ ಹಲವೆಡೆ ಗಾಳಿಮಳೆ: ಆರು ಮಂದಿ ಸಾವು, ಹಲವೆಡೆ ಹಾನಿ

ಬೆಂಗಳೂರು: ಬೆಂಗಳೂರು ಸೇರಿದಂತೆ, ರಾಜ್ಯದ ಹಲವೆಡೆ ಭಾನುವಾರ ಬಿರುಗಾಳಿ ಸಹಿತ ಸುರಿದ ಮಳೆಗೆ ಭಾರಿ ಅನಾಹುತವಾಗಿದ್ದು, ಮಳೆ ಸಂಬಂಧಿ ಕಾರಣಕ್ಕೆ ರಾಜ್ಯದಲ್ಲಿ ಒಟ್ಟು ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ಮಧ್ಯಾಹ್ನದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಮೈಸೂರು, ಕೊಡಗು, ಧಾರವಾಢ, ಕೊಪ್ಪಳ ಮೊದಲಾದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಹಲವೆಡೆ ಬೃಹದಾಕಾರದ ಮರಗಳು ಧರೆಗೆ ಉರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಅಂಡರ್‌ಪಾಸ್ ಮೂಲಕ ಕಾರನ್ನು ದಾಟಿಸಲು ಯತ್ನಿಸಿದಾಗ ಅಲ್ಲಿ ತುಂಬಿದ್ದ ನೀರು ಕಾರಿನೊಳಗೆ ನುಗ್ಗಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ (23) ಎಂಬವರು ಸಾವಿಗೀಡಾಗಿದ್ದಾರೆ.
ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕೆ.ದೊಡ್ಡಕೊಪ್ಪಲಿನ ಸ್ವಾಮಿ (18) ಸಾವಿಗೀಡಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಅವರ್ತಿಯ ಲೋಕೇಶ್ (55) ಎಂಬವರು ಹೊಲದಲ್ಲಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಮರ ದ್ವಿಚಕ್ರ ವಾಹನದ ಮೇಲೆ ಉರುಳಿ ಸವಾರ ವೇಣುಗೋಪಾಲ (58) ಎಂಬವರು ಮೃತಪಟ್ಟಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಡಿ. ಸಿದ್ದಾಪುರದಲ್ಲಿ ಸಿಡಿಲು ಬಡಿದು ಅಪ್ಪೇನಹಳ್ಳಿ ಮಲ್ಲಿಕಾರ್ಜುನ (39) ಎಂಬವರು ಸಾವಿಗೀಡಾಗಿದ್ದಾರೆ. ಕೊಪ್ಪಳ ತಾಲೂಕಿನ ಶಿವಪುರದಲ್ಲಿ ಶ್ರೀಕಾಂತ ಮೇಟಿ (16) ಎಂಬ ಬಾಲಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮಂಟೆಕೊಪ್ಪಲಿನಲ್ಲಿ ಸಿಡಿಲು ಬಡಿದು ಹರೀಶ (42) ಎಂಬವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement