ಮಲಗುವ ವಿಷಯಕ್ಕೆ ಜಗಳ: ತನ್ನ ಮಗಳನ್ನೇ 25 ಬಾರಿ ಇರಿದುಕೊಂದ ಅಪ್ಪ…!

ಸೂರತ್‌ : ಸಣ್ಣ ಕಲಹದ ನಂತರ   ಕನಿಷ್ಠ 25 ಬಾರಿ ಚಾಕುವಿನಿಂದ ಇರಿದು ತನ್ನ ಮಗಳನ್ನು ಕೊಂದಿದ್ದಕ್ಕಾಗಿ ಸೂರತ್‌ನ ವ್ಯಕ್ತಿಯನ್ನು ಬಂಧಿಸಲಾಗಿದೆ. ಮೇ 18 ರ ರಾತ್ರಿ ಸೂರತ್‌ನ ಕಡೋದರಾ ಪ್ರದೇಶದಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಆತನ ಪತ್ನಿ ರೇಖಾ ನೀಡಿದ ದೂರಿನ ಆಧಾರದ ಮೇಲೆ ಕೊಲೆಯಾದ ಎರಡು ದಿನಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ರಾಮಾನುಜ ಎಂಬ ಆರೋಪಿ ತನ್ನ ಕುಟುಂಬದೊಂದಿಗೆ ಸೂರತ್‌ನ ಸತ್ಯ ನಗರ ಸೊಸೈಟಿಯಲ್ಲಿ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದ. ತನಿಖಾ ಅಧಿಕಾರಿಗಳು ಮಾಹಿತಿ ನೀಡಿದಂತೆ, ತಮ್ಮ ಮಗಳು ಟೆರೇಸ್ ಮೇಲೆ ಮಲಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ನಡೆದ ಸಣ್ಣ ಜಗಳದಲ್ಲಿ ಆರೋಪಿಯು ತಾಳ್ಮೆ ಕಳೆದುಕೊಂಡ ನಂತರ ಪರಿಸ್ಥಿತಿ ಉಲ್ಬಣಗೊಂಡು ಅದು ಕೊಲೆಯಲ್ಲಿ ಅಂತ್ಯವಾಗಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ, ಸರಿಸುಮಾರು ರಾತ್ರಿ 11:20ಕ್ಕೆ, ರಾಮಾನುಜ ಮೊದಲು ತನ್ನ ಮಕ್ಕಳ ಮುಂದೆ ತನ್ನ ಹೆಂಡತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆ ಗಾಯಗೊಂಡ ನಂತರ, ಮಕ್ಕಳು ಆತನನ್ನು ಹಿಡಿಯಲು ಪ್ರಯತ್ನಿಸಿದರು ಆದಾಗ್ಯೂ, ಆರೋಪಿಯು ತನ್ನ ಮಗಳನ್ನು ಹಿಡಿದುಕೊಂಡು ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ. ತನ್ನ ಜೀವವನ್ನು ಉಳಿಸಿಕೊಳ್ಳಲು ಅವಳು ಹತ್ತಿರದ ಕೋಣೆಗೆ ಓಡಿದ್ದಾಳೆ. ಆದರೆ ಆರೋಪಿ ಅವಳನ್ನು ಹಿಂಬಾಲಿಸಿ ಇರಿದು ಸಾಯಿಸಿದ್ದಾನೆ.
ತನ್ನ ಮಗಳ ಮೇಲೆ ಮಾರಣಾಂತಿಕ ಹಲ್ಲೆಯ ನಂತರವೂ, ರಾಮಾನುಜನು ತನ್ನ ಹೆಂಡತಿಗೆ ಹಾನಿ ಮಾಡಲು ನಿರ್ಧರಿಸಿ ತಾರಸಿಗೆ ಏರಿದ್ದಾನೆ. ತಾಯಿಯನ್ನು ಮಕ್ಕಳು ರಕ್ಷಿಸಿದ್ದಾರೆ, ಆದರೆ ಮಗಳು ರಾಮಾನುಜನ ಚಾಕು ಇರಿತದಿಂದ ಮೃತಪಟ್ಟಿದ್ದಾಳೆ.
ಈ ಬಗ್ಗೆ ರಾಮಾನುಜನ ಪತ್ನಿ ಸೂರತ್ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅಧಿಕಾರಿಗಳು ತಕ್ಷಣವೇ ಆತನನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕರಣದ ಪ್ರಮುಖ ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಆರ್‌.ಕೆ. ಪಟೇಲ ತಿಳಿಸಿದ್ದಾರೆ.
ತನಿಖೆ ಮುಂದುವರೆದಂತೆ, ಅಧಿಕಾರಿಗಳು ಸಂತ್ರಸ್ತೆ ಮತ್ತು ದೂರುದಾರರಾದ ರೇಖಾ ಅವರಿಂದ ಹೇಳಿಕೆಗಳನ್ನು ತೆಗೆದುಕೊಂಡಿದ್ದಾರೆ. ಏತನ್ಮಧ್ಯೆ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement