ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ನಾಳೆ, ನಾಡಿದ್ದು ಪ್ರತಿಭಟನೆ

ಬೆಂಗಳೂರು : ರಾಜ್ಯ ಸರ್ಕಾರದ ಮೂರು ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಸೋಮವಾರ ಮತ್ತು ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು, ಭಾನುವಾರ (ಜೂನ್ 4) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಮೂರು ಗೊಂದಲದ ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
“ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಮೊನ್ನೆ 200 ಯೂನಿಟ್‌ ವರೆಗೆ ವಿದ್ಯುತ್ ಉಚಿತ ಎಂದಿದ್ದ ಸರಕಾರ, ಈಗ 80 ಯೂನಿಟ್‌ ವರೆಗೆ ಎಂದು ಆದೇಶ ಹೊರಡಿಸಿ ಗೊಂದಲದ ನೀತಿ ಪ್ರದರ್ಶಿಸಿದೆ” ಎಂದು ರವಿಕುಮಾರ ಆಕ್ಷೇಪಿಸಿದರು.
ಒಂದು ಕಡೆ ರಾಜ್ಯ ಸರ್ಕಾರ ವಿದ್ಯುತ್ ಶುಲ್ಕವನ್ನೂ ಏರಿಸಿದೆ. ಒಂದು ಯೂನಿಟ್‌ಗೆ 70 ಪೈಸೆ ಹೆಚ್ಚಿಸಿದೆ. ಒಂದೆಡೆ ಉಚಿತ ಎಂದು ಹೇಳುತ್ತದೆ; ಮತ್ತೊಂದೆಡೆ ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲು ಮಾಡಲು ಹೊರಟಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್ ಪಡೆಯಲು ನಾವು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕೆಆರ್‌ಎಸ್ ಭರ್ತಿಯಾಗಿಲ್ಲ ; ಆದ್ರೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸಲು ಸಿಡಬ್ಲ್ಯುಆರ್‌ಸಿ ಶಿಫಾರಸ್ಸು

ಹಾಲಿನ ಪ್ರೋತ್ಸಾಹ ಧನ ಇಳಿಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, “ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲು ಖರೀದಿಯ ಪ್ರೋತ್ಸಾಹ ಧನ ಪ್ರತಿ ಲೀಟರ್‌ಗೆ 5 ರೂಪಾಯಿ ಇತ್ತು. ಈಗ ಅದನ್ನು 1.5 ರೂ. ಕಡಿಮೆ ಮಾಡಲಾಗಿದೆ. ಇದು ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ. ಇದನ್ನು ಬದಲಿಸಿ ಹಿಂದಿನಂತೆ ಪ್ರೋತ್ಸಾಹಧನ ಕೊಡಿ” ಎಂದು ರವಿಕುಮಾರ ಆಗ್ರಹಿಸಿದರು.
ಪಶು ಸಂಗೋಪನಾ ಸಚಿವ ವೆಂಕಟೇಶ ಹೇಳಿಕೆ ಖಂಡಿಸಿದ ರವಿಕುಮಾರ ಅವರು, “ಹಸುಗಳನ್ನು ನಮ್ಮ ದೇಶದಲ್ಲಿ ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತಾರೆ. ಮಹಾತ್ಮ ಗಾಂಧಿಯವರು ಕೂಡ ಗೋಹತ್ಯೆ ಮಾಡಬಾರದು ಎಂದು ಹೇಳಿದ್ದರು. ಇದು ಗೊತ್ತಿದ್ದರೂ ರಾಜ್ಯ ಸರ್ಕಾರ ಇದರ ವಿರುದ್ಧ ಹೋಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
1948 ಮತ್ತು 1964ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿತ್ತು. ಇದರಲ್ಲಿ ಎಮ್ಮೆ ಮತ್ತು ಕೋಣಗಳನ್ನು ವಧಿಸಬಹುದೆಂದು ಇದೆ. 1978ರ ಕಾನೂನಿನಲ್ಲಿ ಎತ್ತು ಮತ್ತು ಹೋರಿಗಳನ್ನು, 2020ರಲ್ಲಿ ಬಿಜೆಪಿ ಸರ್ಕಾರ ತಂದ ಕಾನೂನಿನಲ್ಲಿ ಗೋಹತ್ಯೆ ಮತ್ತು ಎತ್ತು/ಹೋರಿಗಳನ್ನು ಹತ್ಯೆ ಮಾಡಬಾರದು ಎಂದು ಹೇಳಲಾಗಿದೆ. ಆದರೆ, ಈ ಸರ್ಕಾರವು ಗೋಹತ್ಯೆಗೆ ಅವಕಾಶ ಮಾಡಿಕೊಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗೋಹತ್ಯಾ ನಿಷೇಧ ಕಾನೂನು ಹಿಂಪಡೆದರೆ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪ್ರಮುಖ ಸುದ್ದಿ :-   ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ನಾಗೇಂದ್ರ ವಶಕ್ಕೆ ಪಡೆದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement