ಬೆಂಗಳೂರು : ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಯ ನೇಮಕಾತಿಗೆ ವಯೋಮಿತಿಯನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ) ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್. ಎನ್. ಆದೇಶ ಹೊರಡಿಸಿದ್ದು, 2 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ಆದೇಶಿಸಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಲ್ಬಣಿಸಿದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹುದ್ದೆಯ ನೇಮಕಾತಿಗೆ ವಯೋಮಿತಿಯನ್ನು ಹೆಚ್ಚಿಸುವ ಆದೇಶ ಹೊರಡಿಸಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಪತ್ರ 21-10-2022 ಉಲ್ಲೇಖ ಮಾಡಿ ಆದೇಶ ಹೊರಡಿಸಲಾಗಿದೆ. ಮಾನ್ಯ ಶಾಸಕರುಗಳು, ಗಣ್ಯವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಂದ ಸ್ವೀಕೃತಗೊಂಡಿರುವ ಮನವಿಗಳಲ್ಲಿ ಕೋವಿಡ್-19ರ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನೇಮಕಾತಿಗಳಿಗೆ 2 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ಆದೇಶ ಹೊರಡಿಸುವಂತೆ ಕೋರಲಾಗಿತ್ತು ಎಂದು ತಿಳಿಸಲಾಗಿದೆ.
ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಂದ ವರದಿ ಪಡೆಯಲಾಗಿದ್ದು, ಸದರಿ ವರದಿಯಲ್ಲಿ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಯಲ್ಲಿ ವಯೋಮಿತಿಯನ್ನು ಸಡಿಲಿಸುವ ಕುರಿತಂತೆ ಸರ್ಕಾರದ ಹಂತದಲ್ಲಿ ಪರಿಶೀಲಿಸಿ, ಸೂಕ್ತ ಆದೇಶ ಹೊರಡಿಸಬಹುದೆಂಬ ಅಭಿಪ್ರಾಯದೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಆರ್ಥಿಕ ಇಲಾಖೆಯು ದಿನಾಂಕ 10/06/2020ರ ಸುತ್ತೋಲೆಯಲ್ಲಿ ಕೋವಿಡ್-19ರ ಸಾಂಕ್ರಾಮಿಕ ಕಾಯಿಲೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಸೃಷ್ಟಿಯಾಗಿರುವುದರಿಂದ ಯಾವುದೇ ಅನುದಾನ ರಹಿತ ವಿದ್ಯಾ ಸಂಸ್ಥೆಗಳನ್ನು ಹಾಗೂ ಅನುದಾನಿತ ಸಂಸ್ಥೆಗಳಲ್ಲಿನ ಅನುದಾನರಹಿತ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಆರ್ಥಿಕ ಮಿತವ್ಯಯದ ಕಾರಣ ನಿರ್ಬಂಧ ವಿಧಿಸಿತ್ತು. ಅದರಂತೆ, 2020-21 ಮತ್ತು 2021-22ನೇ ಶೈಕ್ಷಣಿಕ ಸಾಲುಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತವಾಗಿದ್ದ ಕಾರಣ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ/ ಪ್ರೌಢಶಾಲೆ/ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ಹಾಗೂ ಖಾಸಗಿ ಅನುದಾನಿತ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳಿಗೆ 1 ವರ್ಷದ ಅವಧಿಗೆ ಮಾತ್ರ ಗರಿಷ್ಠ ವಯೋಮಿತಿಯಲ್ಲಿ 2 ವರ್ಷಗಳ ಈ ಸಡಿಲಿಕೆ ಮಾನದಂಡವು ಮೊದಲ ನೇರ ನೇಮಕಾತಿಗೆ ಮಾತ್ರ ಅನ್ವಯವಾಗುವಂತೆ ಜಾರಿಗೊಳಿಸಲು ಸರ್ಕಾರವು ತೀರ್ಮಾನಿಸಿದೆ.
ಸರ್ಕಾರದ ಆದೇಶ ದಿನಾಂಕ 03-06-2023 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಮೇರೆಗೆ, ಕೋಡ್-19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳ ಹಾಗೂ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ, ಖಾಸಗಿ/ ಅನುದಾನಿತ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳ ಮೊದಲ ನೇರ ನೇಮಕಾತಿಗೆ ಮಾತ್ರ ಅನ್ವಯವಾಗುವಂತೆ 23-06-2022 ರಿಂದ 1 ವರ್ಷದ ಅವಧಿಗೆ ಮಾತ್ರ ಗರಿಷ್ಠ ವಯೋಮಿತಿಯಲ್ಲಿ 2 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ