ಇಬ್ಬರನ್ನು ಸಾಯಿಸಿದ್ದ ಕಾಡಾನೆ ಕೊನೆಗೂ ಸೆರೆ : ಕೋಪದಲ್ಲಿ ಕ್ರೇನಿಗೆ ಗುದ್ದಿ ದಂತ ಮುರಿದುಕೊಂಡ ಆನೆ..!

ರಾಮನಗರ: ಐದು ದಿನಗಳ ಅಂತರದಲ್ಲಿ ಇಬ್ಬರನ್ನು ಸಾಯಿಸಿದ್ದ ಕಾಡಾನೆ ಕೊನೆಗೂ ಸೆರೆ ಸಿಕ್ಕಿದೆ. ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸಿಕ್ಕಿಬಿದ್ದ 40 ವರ್ಷದ ಗಂಡಾನೆಯನ್ನು ಲಾರಿಗೆ ಹತ್ತಿಸುವ ವೇಳೆ ಅದರ ದಂತ ಮುರಿದು ಹೋಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಳಿಯ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದೆ. ಅರ್ಜುನ, ಅಭಿಮನ್ಯು, ಭೀಮ, ಶ್ರೀಕಂಠ, ಮಹೇಂದ್ರ ಹೆಸರಿನ ಸಾಕಿದ ಆನೆಗಳ ಸಹಾಯದಿಂದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.
ಗುರುವಾರ ಬೆಳಗ್ಗೆ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಈ ಕಾಡಾನೆ ಪತ್ತೆಯಾಗಿತ್ತು. ಹೀಗಾಗಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು. ಆನಂತರ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾದರು. ಆದರೆ ಈ ವೇಳೆ ಆನೆ ಸಾಕಷ್ಟು ಪ್ರತಿರೋಧ ವ್ಯಕ್ತಪಡಿಸಿತು. ಅದನ್ನು ಲಾರಿಗೆ ಹತ್ತಿಸುವಾಗ ಕೋಪಗೊಂಡ ಆನೆ ಸಿಟ್ಟಿನಲ್ಲಿ ಕ್ರೇನ್‌ಗೆ ಗುದ್ದಿತ್ತು. ಇದರಿಂದ ಆನೆಯ ದಂತವೇ ಮುರಿಯಿತು. ಕೊನೆಗೂಸಾಕಾನೆಗಳ ಸಹಾಯದಿಂದ ಕಾಡಾನೆಯನ್ನ ಲಾರಿಗೆ ಹತ್ತಿಸಲಾಯಿತು.
ಸೆರೆಸಿಕ್ಕ ಕಾಡಾನೆ ದಾಳಿಗೆ ಐದು ದಿನಗಳ ಅಂತರದಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಮೇ 30ರಂದು ಕನಕಪುರ ತಾಲೂಕಿನ ಹೊಸಕಬ್ಬಾಳು ಗ್ರಾಮದ ಬಳಿ ಜಮೀನಿಗೆ ತೆರಳುತ್ತಿದ್ದ ಕಬ್ಬಾಳು ಗ್ರಾಮದ ಕಾಳಯ್ಯ(60) ಹಾಗೂ ಜೂನ್ 3ರಂದು ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದ ಬಳಿ ಮಾವಿನ ತೋಟ ಕಾವಲು ಕಾಯುತ್ತಿದ್ದ, ಕನಕಪುರ ಮೂಲದ ವೀರಭದ್ರಯ್ಯ(56) ಎಂಬವರನ್ನು ಸಾಯಿಸಿತ್ತು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement