ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಜನರ ಗುಂಪೊಂದು ತನ್ನ ಪತ್ನಿಯನ್ನು “ಅರೆಬೆತ್ತಲೆ ಮಾಡಿ ಕ್ರೂರವಾಗಿ ಥಳಿಸಿದೆ” ಎಂದು ಸೇನಾ ಯೋಧರೊಬ್ಬರು ಆರೋಪಿಸಿದ್ದಾರೆ.
ನಿವೃತ್ತ ಸೇನಾ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಎನ್.ತ್ಯಾಗರಾಜನ್ ಅವರು ಪೋಸ್ಟ್ ಮಾಡಿದ ವೀಡಿಯೊ, ಟ್ವಿಟರ್‌ನಲ್ಲಿ ಸೇನಾ ಜವಾನ ಹವಾಲ್ದಾರ್ ಪ್ರಭಾಕರನ್ ಅವರು ಹೇಳುವುದನ್ನು ಕೇಳಬಹುದು. ಸೇನೆಯಲ್ಲಿರುವ ಪ್ರಭಾಕರನ್ ತಮಿಳುನಾಡಿನ ಪಡವೇಡು ಗ್ರಾಮದವರಾಗಿದ್ದು, ಪ್ರಸ್ತುತ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
“ನನ್ನ ಪತ್ನಿ ಭೋಗ್ಯಕ್ಕೆ ಪಡೆದ ಸ್ಥಳದಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಆಕೆಯನ್ನು 120 ಮಂದಿ ಥಳಿಸಿ ಅಂಗಡಿಯ ವಸ್ತುಗಳನ್ನು ಹೊರಗೆ ಎಸೆದಿದ್ದಾರೆ. ನಾನು ಎಸ್‌ಪಿ ಅವರಿಗೆ ಮನವಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಡಿಜಿಪಿ ಸರ್ ದಯವಿಟ್ಟು ಸಹಾಯ ಮಾಡಿ. ಅವರು ನನ್ನ ಮನೆಯವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಬೆದರಿಸಿದ್ದಾರೆ. ನನ್ನ ಹೆಂಡತಿಯನ್ನು ಅರೆಬೆತ್ತಲೆ ಮಾಡಿ ಕ್ರೂರವಾಗಿ ಥಳಿಸಲಾಗಿದೆ ಎಂದು ಪ್ರಭಾಕರನ್ ವೀಡಿಯೊದಲ್ಲಿ ತಮಿಳಿನಲ್ಲಿ ಹೇಳಿದ್ದಾರೆ.
ಆದಾಗ್ಯೂ, ಕಂಧವಾಸಲ್ ಪೊಲೀಸರು ಪ್ರಾಥಮಿಕ ತನಿಖೆಯ ನಂತರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಪ್ರಭಾಕರನ್ ಘಟನೆಯನ್ನು “ಉತ್ಪ್ರೇಕ್ಷೆ” ಮಾಡಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ರೇಣುಕಾಂಬಲ್ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ನಿರ್ಮಿಸಿದ್ದ ಅಂಗಡಿಯನ್ನು ಪ್ರಭಾಕರನ್ ಅವರ ಮಾವ ಸೆಲ್ವಮೂರ್ತಿ ಎಂಬವರಿಗೆ ಕುಮಾರ ಎಂಬವರು ಐದು ವರ್ಷಗಳ ಅವಧಿಗೆ 9.5 ಲಕ್ಷ ರೂ.ಗಳಿಗೆ ಲೀಸ್ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕುಮಾರ್ ಸತ್ತ ನಂತರ ಅವರ ಮಗ ರಾಮು ಅಂಗಡಿಯನ್ನು ಮರಳಿ ಬಯಸಿದ್ದು, ಅದಕ್ಕಾಗಿ ಸೆಲ್ವಮೂರ್ತಿ ಅವರಿಗೆ ಹಣವನ್ನು ಹಿಂದಿರುಗಿಸಲು ಒಪ್ಪಿಕೊಂಡಿದ್ದರು. ಅದರಂತೆ ಫೆಬ್ರವರಿ 10 ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಆದರೆ ಸೆಲ್ವಮೂರ್ತಿ ಅವರು ಹಣವನ್ನು ಪಡೆದುಕೊಂಡಿರುವುದನ್ನು ನಿರಾಕರಿಸಿದರು ಮತ್ತು ಅಂಗಡಿ ಬಿಟ್ಟುಕೊಡಲು ನಿರಾಕರಿಸಿದರು ಎಂದು ರಾಮು ಹೇಳಿಕೊಂಡಿದ್ದಾರೆ.
ಜೂನ್ 10 ರಂದು ರಾಮು ಅವರು ಸೆಲ್ವಮೂರ್ತಿ ಅವರ ಮಕ್ಕಳಾದ ಜೀವ ಮತ್ತು ಉದಯ ಅವರಿಗೆ ಹಣವನ್ನು ನೀಡಲು ಅಂಗಡಿಗೆ ಹೋಗಿದ್ದರು, ಆಗ ಅವರು ರಾಮು ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳಿವೆ. ಜೀವಾ ಚಾಕುವಿನಿಂದ ರಾಮುವಿನ ತಲೆಗೆ ಕೊಯ್ದಿದ್ದ ಎನ್ನಲಾಗಿದೆ. ಘರ್ಷಣೆಯನ್ನು ನೋಡಿದ ನಂತರ, ನೋಡುಗರು ರಾಮು ಅವರ ಬೆಂಬಲಕ್ಕೆ ಬಂದರು, ಇದು ದೊಡ್ಡ ಜಗಳಕ್ಕೆ ಕಾರಣವಾಯಿತು ಮತ್ತು ಆಗ ಅಂಗಡಿಯಲ್ಲಿನ ವಸ್ತುಗಳನ್ನು ಹೊರಗೆ ಎಸೆಯಲಾಯಿತು ಎಂದು ಪೊಲೀಸರು ಹೇಳುತ್ತಾರೆ. ಪ್ರಭಾಕರನ್ ಅವರ ಪತ್ನಿ ಕೀರ್ತಿ ಮತ್ತು ಅವರ ತಾಯಿ ಅಂಗಡಿಯಲ್ಲಿದ್ದರೂ ಗುಂಪು ಅವರ ಮೇಲೆ ಹಲ್ಲೆ ನಡೆಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಂಜೆಯ ವೇಳೆಗೆ ಪ್ರಭಾಕರನ ಪತ್ನಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಪೊಲೀಸ್ ಅಧಿಕಾರಿಗಳ ಪ್ರಕಾರ ತನ್ನ ಪತ್ನಿಗೆ ಗಂಭೀರ ಗಾಯಗಳಾಗಿವೆ ಎಂದು ಸೈನಿಕ ಹೇಳಿದರೂ ಅದು ಉತ್ಪ್ರೇಕ್ಷೆಯೇ ಹೊರತು ನಿಜವಲ್ಲ.
ಕಂದವಾಸಲ್ ಪೊಲೀಸರು ದೂರುಗಳ ಆಧಾರದ ಮೇಲೆ ಎರಡೂ ಕಡೆಯವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಹವಾಲ್ದಾರ್ ಪ್ರಭಾಕರನ್ ಅವರ ಹೇಳಿಕೆಗಳು ಉತ್ಪ್ರೇಕ್ಷಿತವಾಗಿವೆ ಎಂದು ಹೇಳಿದ್ದಾರೆ.
ಘಟನೆಯ ಕುರಿತು ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾ ಟಿಪ್ಪಣಿಯಲ್ಲಿ ಸೇನಾ ಜವಾನನ ಪತ್ನಿ ಜಗಳದ ಸಂದರ್ಭದಲ್ಲಿ ತನ್ನ ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಸೇನಾ ಯೋಧನೊಂದಿಗೆ ಮಾತನಾಡಿ, ಬಿಜೆಪಿಯು ಅವರ ಪತ್ನಿಗೆ ನ್ಯಾಯ ದೊರಕಿಸಿಕೊಡಲಿದೆ ಎಂದು ಹೇಳಿದ್ದಾರೆ. ಜವಾನನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಪಕ್ಷವು ಅವರ ಜೊತೆಗೆ ನಿಲ್ಲುತ್ತದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ