ಬೆಂಗಳೂರು: ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಗುರುತಿನ ಚೀಟಿ ವಿಚಾರಕ್ಕೆ ಮಹಿಳೆಯರಲ್ಲಿದ್ದ ಗೊಂದಲಗಳಿಗೆ ಸಾರಿಗೆ ಇಲಾಖೆ ತೆರೆ ಎಳೆದಿದೆ.
ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಲು ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯ ಝರಾಕ್ಸ್ ಇದ್ದರೂ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಒರಿಜಿನಲ್ ಐಡಿ ಕಾರ್ಡ್ (Original ID )ಬದಲು ಪುರಾವೆಗಳಿಗಾಗಿ ಅವುಗಳ ನಕಲು ಪ್ರತಿ ಇದ್ದರೂ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ತಿದ್ದುಪಡಿ ಆದೇಶದಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ತಿದ್ದುಪಡಿ ಆದೇಶ ಹೊರಡಿಸಿದ್ದು, ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತೋರಿಸಬೇಕಾದ ದಾಖಲಾತಿಗಳ ನಕಲು ಪ್ರತಿ ತೋರಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದೆ.
ಮಹಿಳಾ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಗುರುತಿನ ಚೀಟಿಗಳ ಮೂಲ ಪ್ರತಿ, ನಕಲು, ಡಿಜಿಲಾಕರ್ (ಹಾರ್ಡ್ ಮತ್ತು ಸಾಫ್ಟ್ ಪ್ರತಿ ) ಮಾದರಿಯಲ್ಲಿ ಹಾಜರುಪಡಿಸಿ ಪ್ರಯಾಣಿಸಬಹುದು ಎಂದು ತಿದ್ದುಪಡಿ ಆದೇಶದಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ