ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಪ್ರಬಲ ಚಂಡಮಾರುತ ಬಿಪೋರ್ ಜಾಯ್‌ನ ನಿರೀಕ್ಷಿತ ಅಪ್ಪಳಿಸುವಿಕೆಯ ಎರಡು ದಿನಗಳ ಮೊದಲು ಅಧಿಕಾರಿಗಳು ಮಂಗಳವಾರ ಗುಜರಾತ್ ಕರಾವಳಿ ಪ್ರದೇಶಗಳಿಂದ 30,000 ಜನರನ್ನು ತಾತ್ಕಾಲಿಕ ಆಶ್ರಯದ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಹಲವಾರು ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ತಂಡಗಳು ಸ್ಟ್ಯಾಂಡ್‌ಬೈನಲ್ಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಸೇನಾ ಅಧಿಕಾರಿಗಳು ನಾಗರಿಕ ಆಡಳಿತ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಗಳೊಂದಿಗೆ ಜಂಟಿಯಾಗಿ ಪರಿಹಾರ ಕಾರ್ಯಾಚರಣೆಗಳನ್ನು ಯೋಜಿಸಿದ್ದಾರೆ. ಸೇನೆಯನ್ನು ಆಯಕಟ್ಟಿನ ಸ್ಥಳಗಳಲ್ಲಿ ಪ್ರವಾಹ ಪರಿಹಾರಕ್ಕಾಗಿ ಸಿದ್ಧವಾಗಿ ಇರಿಸಲಾಗಿದೆ.
ಚಂಡಮಾರುತದ ಸಿದ್ಧತೆಯ ಅವಲೋಕನಕ್ಕಾಗಿ ವರ್ಚುವಲ್ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಸರ್ಕಾರವು ಚಂಡುಮಾರುತದ ಸೂಕ್ಷ್ಮ ಸ್ಥಳಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಮತ್ತು ವಿದ್ಯುತ್, ದೂರಸಂಪರ್ಕ, ಆರೋಗ್ಯ ಮತ್ತು ಕುಡಿಯುವ ನೀರಿನಂತಹ ಎಲ್ಲಾ ಅಗತ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದರು. ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಇಬ್ಬರು ಕೇಂದ್ರ ಸಚಿವರು, ಹಲವು ಗುಜರಾತ್ ಸಚಿವರು ಮತ್ತು ಸಂಸದರು, ಶಾಸಕರು ಮತ್ತು ಚಂಡಮಾರುತದಿಂದ ಹಾನಿಗೊಳಗಾಗಬಹುದು ಎಂದು ನಿರೀಕ್ಷಿಸಲಾದ ಎಂಟು ಜಿಲ್ಲೆಗಳ ಅಧಿಕಾರಿಗಳು ಭಾಗವಹಿಸಿದ್ದರು.
“ನಾವು ಈಗಾಗಲೇ ಕರಾವಳಿಯ ಸಮೀಪ ವಾಸಿಸುವ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದ್ದೇವೆ, ಇದುವರೆಗೆ, ವಿವಿಧ ಜಿಲ್ಲಾಡಳಿತಗಳು ಸುಮಾರು 30,000 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿವೆ” ಎಂದು ರಾಜ್ಯ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ಹೇಳಿದ್ದಾರೆ. ಕರಾವಳಿಯ 10 ಕಿಮೀ ವ್ಯಾಪ್ತಿಯ ಜನರನ್ನು ಸ್ಥಳಾಂತರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು, ಇದುವರೆಗೆ ಚಂಡಮಾರುತಕ್ಕೆ ಸಂಬಂಧಿಸಿದಂತೆ ಒಂದು ಸಾವು ದಾಖಲಾಗಿದೆ.
ಜೂನ್ 15 ರ ಸಂಜೆ ಗಂಟೆಗೆ ಸರಾಸರಿ 125-135 ಕಿಮೀ ವೇಗದಲ್ಲಿ ಹಾಗೂ ಗರಿಷ್ಠ ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುವ ಚಂಡಮಾರುತವು ಕಚ್‌ನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಜಖೌ ಬಂದರಿನ ಬಳಿ ಹಾದುಹೋಗುವ ಸಾಧ್ಯತೆಯಿದೆ ಎಂದು ಅಹಮದಾಬಾದ್ ಐಎಂಡಿ ನಿರ್ದೇಶಕಿ ಮನೋರಮಾ ಮೊಹಂತಿ ಹೇಳಿದ್ದಾರೆ. ಸೌರಾಷ್ಟ್ರ-ಕಚ್ ಪ್ರದೇಶದ ಕರಾವಳಿ ಭಾಗಗಳಲ್ಲಿ, ವಿಶೇಷವಾಗಿ ಕಚ್, ಪೋರಬಂದರ್ ಮತ್ತು ದ್ವಾರಕಾ ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.
“ಇದು ಅಪ್ಪಳಿಸಿ ದುರ್ಬಲಗೊಂಡ ನಂತರ, ಚಂಡಮಾರುತದ ಚಲನೆಯು ಈಶಾನ್ಯ ದಿಕ್ಕಿನಲ್ಲಿ ಸಾಗುವ ಸಾಧ್ಯತೆಯಿದೆ ಮತ್ತು ಇದು ದಕ್ಷಿಣ ರಾಜಸ್ಥಾನದ ಕಡೆಗೆ ಚಲಿಸುವ ನಿರೀಕ್ಷೆಯಿದೆ. ಇದು ಜೂನ್ 15-17 ರವರೆಗೆ ಉತ್ತರ ಗುಜರಾತ್‌ನಲ್ಲಿ ಭಾರೀ ಮಳೆಯನ್ನು ತರುತ್ತದೆ ಎಂದು ಮೊಹಾಂತಿ ಹೇಳಿದರು.
ಜೂನ್ 16 ರವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ, ಬಂದರುಗಳನ್ನು ಮುಚ್ಚಲಾಗಿದೆ ಮತ್ತು ಹಡಗುಗಳು ಲಂಗರು ಹಾಕಲ್ಪಟ್ಟಿವೆ ಏಕೆಂದರೆ ಸಮುದ್ರವು ತುಂಬಾ ಪ್ರಕ್ಷುಬ್ಧವಾಗಿದೆ ಮತ್ತು ಸಮೀಪಿಸುತ್ತಿರುವ ಚಂಡಮಾರುತದಿಂದಾಗಿ ಬಲವಾದ ಗಾಳಿಯೊಂದಿಗೆ ಹವಾಮಾನವು ಪ್ರತಿಕೂಲವಾಗಿದೆ.
“ಜೂನ್ 14 ರವರೆಗೆ ಸಮುದ್ರವು ತುಂಬಾ ಒರಟಾಗಿ ಉಳಿಯುತ್ತದೆ, ಜೂನ್ 15 ರಂದು ಅಸಾಧಾರಣವಾಗಿ ಇದು ಹೆಚ್ಚಾಗುತ್ತದೆ” ಎಂದು ಮೊಹಾಂತಿ ಹೇಳಿದರು. ಹವಾಮಾನ ವೈಪರೀತ್ಯದಿಂದ ಯಾವುದೇ ಜೀವಹಾನಿಯಾಗದಂತೆ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪಾಂಡೆ ಹೇಳಿದರು.
ಎರಡು ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಮುದ್ರ ತೀರದಿಂದ 0 ರಿಂದ 5 ಕಿ.ಮೀ ದೂರದಲ್ಲಿರುವ ಜನರನ್ನು ಮೊದಲು ಸ್ಥಳಾಂತರಿಸಲಾಗುವುದು. ನಂತರ ಕರಾವಳಿಯಿಂದ 5 ರಿಂದ 10 ಕಿ.ಮೀ ಅಂತರದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು, ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು. .
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 17 ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) 12 ತಂಡಗಳು ದೇವಭೂಮಿ ದ್ವಾರಕಾ, ರಾಜ್‌ಕೋಟ್, ಜಾಮ್‌ನಗರ್, ಜುನಾಗಢ, ಪೋರಬಂದರ್, ಗಿರ್ ಸೋಮನಾಥ್, ಮೊರ್ಬಿ ಮತ್ತು ವಲ್ಸಾದ್ ಪೀಡಿತ ಜಿಲ್ಲೆಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಸರ್ಕಾರ ತಿಳಿಸಿದೆ.
ಪಶ್ಚಿಮ ರೈಲ್ವೆ ಇದುವರೆಗೆ 69 ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ 32 ರೈಲುಗಳನ್ನು ಬೇರೆಡೆಗಗೆ ತಿರುಗಿಸಲು ನಿರ್ಧರಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ