
ಬೆಂಗಳೂರು : ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೃಹ ಜ್ಯೋತಿ ಯೋಜನೆಯ ನೋಂದಣಿಯು ಸೇವಾ ಸಿಂಧು ಪೋರ್ಟಲ್ ನಲ್ಲಿ ಭಾನುವಾರ ಆರಂಭಗೊಂಡಿದ್ದು, ಮೊದಲ ದಿನವೇ ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು 55000 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಮೊದಲ ದಿನದಂದು, ದಾವಣಗೆರೆಯಲ್ಲಿ ಅತಿ ಹೆಚ್ಚು, ಅಂದರೆ, 3312 ಅರ್ಜಿಗಳು ಸಲ್ಲಿಕೆಯಾಗಿವೆ. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭಗೊಂಡಿತು, ಯೋಜನೆಗೆ ನೋಂದಣಿಯನ್ನು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ಮಾಡಬೇಕು. ನೋಂದಣಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾನುವಾರ ರಜಾ ದಿನವಾದರೂ ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಯೋಜನೆ ನೋಂದಣಿಯ ಮೇಲುಸ್ತುವಾರಿ ವಹಿಸಿ ಕರ್ತವ್ಯ ನಿರ್ವಹಿಸಿದರು. ಆದರೆ, ಏಕಕಾಲದಲ್ಲಿ ರಾಜ್ಯದಲ್ಲೆಡೆ ಅರ್ಜಿ ಸಲ್ಲಿಕೆ ಕಾರ್ಯಾರಂಭವಾದ ಕಾರಣ ಹಲವೆಡೆ ಸೇವಾ ಸಿಂಧು ಪೋರ್ಟಲ್ ಸರ್ವರ್ ಡೌನ್ ಆಗಿ ಅರ್ಜಿ ಸಲ್ಲಿಸಲು ಸಮಸ್ಯೆಯಾಯಿತು. ಅರ್ಧ ದಿನ ಸರ್ವರ್ ಸ್ಥಗಿತಗೊಂಡ ಕಾರಣ ಕೆಲವೆಡೆ ಗ್ರಾಹಕರು ಕಾದು ಕಾದು ಹೈರಾಣಾಗಿ ವಾಪಸ್ ತೆರಳಬೇಕಾಯಿತು.

ಇ-ಆಡಳಿತ ಇಲಾಖೆ ನೋಂದಣಿ ಪ್ರಕ್ರಿಯೆನ್ನು ಸರಳೀಕರಣಗೊಳಿಸಿದ್ದು, ಗ್ರಾಹಕರು ವಿದ್ಯುತ್ ಬಿಲ್ ನಲ್ಲಿರುವ ಖಾತೆ ಸಂಖ್ಯೆ, ತಮ್ಮ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಗ್ರಾಹಕರು ಯೋಜನೆ ನೋಂದಣಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಇಂಧನ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಗ್ರಾಹಕರು ಮೊಬೈಲ್, ಲ್ಯಾಪ್ ಟಾಪ್ ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಚೇರಿಯನ್ನು ಸಂಪರ್ಕಿಸಿ, ಇಲ್ಲವೆ 24×7 ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ