ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ಮಧ್ಯೆ, ಜೆನರಲ್ ಇಲೆಕ್ಟ್ರಿಕ್ (GE) ಏರೋಸ್ಪೇಸ್ ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್ಗಳನ್ನು ಉತ್ಪಾದಿಸಲು ಇಂದು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪ್ರಕಟಿಸಿದೆ.
ಅಮೆರಿಕದ ಜಿಇ ಏರೋಸ್ಪೇಸ್ ಈ ಒಪ್ಪಂದವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ನಡುವೆ ಪ್ರಮುಖ ಮೈಲಿಗಲ್ಲು ಎಂದು ಕರೆದಿದೆ, ಇದು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಅಂಶವಾಗಿದೆ ಎಂದು ಹೇಳಿದೆ.
ಅಮೆರಿಕ ಏರೋಸ್ಪೇಸ್ ಕಂಪನಿಯ ಪ್ರಕಾರ, ಒಪ್ಪಂದವು ಭಾರತದಲ್ಲಿ ಜಿಇ ಏರೋಸ್ಪೇಸ್ನ F414 ಎಂಜಿನ್ಗಳ ಸಂಭಾವ್ಯ ಜಂಟಿ ಉತ್ಪಾದನೆಯನ್ನು ಒಳಗೊಂಡಿದೆ. ವಾಷಿಂಗ್ಟನ್ನಲ್ಲಿ ಜನರಲ್ ಎಲೆಕ್ಟ್ರಿಕ್ ಅಧ್ಯಕ್ಷ ಎಚ್ ಲಾರೆನ್ಸ್ ಕಲ್ಪ್ ಜೂನಿಯರ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಹೊರಬಿದ್ದಿದೆ.
ಒಪ್ಪಂದಕ್ಕೆ ಅಗತ್ಯವಾದ ರಫ್ತು ಅಧಿಕಾರವನ್ನು ಪಡೆಯಲು ಅಮೆರಿಕ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದೆ ಎಂದು ವಿಮಾನ ಎಂಜಿನ್ ಪೂರೈಕೆದಾರರು ಹೇಳಿದ್ದಾರೆ. ಈ ಪ್ರಯತ್ನವು ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ Mk2 ಕಾರ್ಯಕ್ರಮದ ಭಾಗವಾಗಿದೆ ಎಂದು ಅದು ಹೇಳಿದೆ.
“ಭಾರತ ಮತ್ತು ಎಚ್ಎಎಲ್ (HAL) ಜೊತೆಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆಯಿಂದ ಇದು ಐತಿಹಾಸಿಕ ಒಪ್ಪಂದವಾಗಿದೆ” ಎಂದು GE ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು GE ಏರೋಸ್ಪೇಸ್ ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಚ್. ಲಾರೆನ್ಸ್ ಕಲ್ಪ್, ಜೂನಿಯರ್ ಹೇಳಿದರು.
ಅಮೆರಿಕ ಅಧ್ಯಕ್ಷ ಬೈಡನ್ ಮತ್ತು ಭಾರತದ ಪ್ರಧಾನಿ ಮೋದಿಯವರ ಎರಡು ರಾಷ್ಟ್ರಗಳ ನಡುವಿನ ನಿಕಟ ಸಮನ್ವಯದ ದೃಷ್ಟಿಯನ್ನು ಮುನ್ನಡೆಸುವಲ್ಲಿ ಪಾತ್ರ ವಹಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ F414 ಎಂಜಿನ್ಗಳು ಸಾಟಿಯಿಲ್ಲ ಮತ್ತು ಎರಡೂ ದೇಶಗಳಿಗೆ ಪ್ರಮುಖ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ಪ್ರಯೋಜನಗಳನ್ನು ನೀಡುತ್ತವೆ. ಏಕೆಂದರೆ ನಮ್ಮ ಗ್ರಾಹಕರು ತಮ್ಮ ಮಿಲಿಟರಿ ಫ್ಲೀಟ್ನ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ಎಂಜಿನ್ಗಳನ್ನು ಉತ್ಪಾದಿಸಲು ನಾವು ಸಹಾಯ ಮಾಡುತ್ತೇವೆ ಎಂದು ಅವರು ಹೇಳಿದರು.
LCA Mk2 ಕಾರ್ಯಕ್ರಮದ ಭಾಗವಾಗಿ ಭಾರತೀಯ ವಾಯುಪಡೆಗೆ 99 ಎಂಜಿನ್ಗಳನ್ನು ತಯಾರಿಸಲು ಜಿಇ ಏರೋಸ್ಪೇಸ್ನ ಹಿಂದಿನ ಬದ್ಧತೆಯನ್ನು ಒಪ್ಪಂದವು ಮುಂದಿಡುತ್ತದೆ ಎಂದು ಅಮೆರಿಕ ದೈತ್ಯ ಹೇಳಿದೆ. AMCA Mk2 ಎಂಜಿನ್ ಪ್ರೋಗ್ರಾಂನಲ್ಲಿ ಭಾರತ ಸರ್ಕಾರದೊಂದಿಗೆ ಸಹಯೋಗವನ್ನು ಮುಂದುವರಿಸುವುದಾಗಿ ಜಿಇ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ