ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಘಟನೆಯು ನಾಸಿಕದ ಇಗತ್‌ಪುರಿ ಪ್ರದೇಶದ ಘೋಟಿ-ಸಿನ್ನಾರ್ ರಸ್ತೆಯ ಗಂಭೀರವಾಡಿ ಬಳಿ ಶನಿವಾರ ಸಂಜೆ 5:30 ರ ಸುಮಾರಿಗೆ ನಡೆದಿದೆ. ಈ ಸಂಬಂಧ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ ಎಂದು ಘೋಟಿ ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಮಾಂಸ ಸಾಗಿಸುತ್ತಿದ್ದ ಮುಂಬೈನ ಕುರ್ಲಾ ಪ್ರದೇಶದ ಇಬ್ಬರು ವ್ಯಕ್ತಿಗಳ ಮೇಲೆ 10 ರಿಂದ 15 ಮಂದಿ ‘ಗೋ ರಕ್ಷಕರು’ ಸ್ಟೀಲ್ ರಾಡ್‌ಗಳು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈಗೆ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳಾದ ಅಫಾನ್ ಅನ್ಸಾರಿ (32) ಮತ್ತು ಅವರ ಸಹಚರ ನಾಸಿರ್ ಖುರೇಷಿ (24) ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಧಾಮಂಗಾವ್ ಪ್ರದೇಶದ ಎಸ್‌ಎಂಬಿಟಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಚಿಕಿತ್ಸೆ ವೇಳೆ ಅಫಾನ್ ಅನ್ಸಾರಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು, ಮತ್ತೊಬ್ಬನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಾಸಿರ್ ಖುರೇಷಿ ದೂರಿನ ಆಧಾರದ ಮೇಲೆ ಘೋಟಿ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ ಮತ್ತು ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
ಮಾಂಸದ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಜೂನ್ 8 ರಂದು ಟೆಂಪೋದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರ ಮೇಲೆ ಗೋರಕ್ಷಕರ ಗುಂಪೊಂದು ದಾಳಿ ನಡೆಸಿತ್ತು ಎಂದು ಪೊಲೀಸರು ಮೊದಲು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ