ಕೋಲಾರ : ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ ʼಮರ್ಯಾದ ಹತ್ಯೆʼ ಘಟನೆ ನಡೆದಿದ್ದು, ಇದೇವೇಳೆ ಪ್ರೇಯಸಿ ಸಾವಿನಿಂದ ಮನನೊಂದು ಪ್ರಿಯಕರನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರ ಹೋಬಳಿ ಬೋಡಗುರ್ಕಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ (20) ಎಂಬವಳು ತಂದೆಯಿಂದಲೇ ಕೊಲೆಯಾಗಿದ್ದಾಳೆ. ಪರಿಶಿಷ್ಟ ಜಾತಿಗೆ ಸೇರಿದ ಗಂಗಾಧರ್ (24) ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ ಎಂದು ಗುರುತಿಸಲಾಗಿದೆ.
ಕೊಲೆಯಾದ ಯುವತಿಯನ್ನು ಕೀರ್ತಿ (20) ಎಂದು ಗುರುತಿಸಲಾಗಿದ್ದು, ಪ್ರಿಯಕರ ಗಂಗಾಧರ (24) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಯಾಗಿದ್ದಾನೆ. ಯುವತಿಯ ಕೊಲೆ ಆರೋಪಿ ತಂದೆ ಕೃಷ್ಣಮೂರ್ತಿ(46)ಯನ್ನು ಪೊಲೀಸರು ಬಂಧಿಸಿದ್ದಾರೆ.
ಕೀರ್ತಿ ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರೆ ಗಂಗಾಧರ ತಮಟೆ ಕಲಾವಿದನಾಗಿದ್ದು ಗಾರೆ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಕೀರ್ತಿ ತಂದೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಕೀರ್ತಿ ಹಾಗೂ ಗಂಗಾಧರ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಜಾತಿ ಅಡ್ಡಿಯಾಗಿದೆ. ಇಬ್ಬರ ಮದುವೆಗೆ ಕೀರ್ತಿಯ ತಂದೆ ಒಪ್ಪಿಗೆ ಸೂಚಿಸಿರಲಿಲ್ಲ ಎನ್ನಲಾಗಿದೆ.
ಗಂಗಾಧರನ್ನು ಮರೆತುಬಿಡುವಂತೆ ಪೋಷಕರು ಕೀರ್ತಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದಾರೆ. ಸೋಮವಾರ ರಾತ್ರಿಯೂ ಇದೇ ವಿಚಾರವಾಗಿ ಜಗಳ ನಡೆದಿದ್ದು, ಈ ವೇಳೆ ಯುವತಿ ಆತನನ್ನೇ ಮದುವೆಯಾಗುವುದಾಗಿ ಹಟ ಮಾಡಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಮಗಳನ್ನು ಉಸಿರು ಗಟ್ಟಿಸಿ ಸಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸುದ್ದಿ ಹತ್ತಿರದಲ್ಲೇ ಇರುವ ಗಂಗಾಧರ ಅವರ ಕುಟುಂಬಕ್ಕೂ ಗೊತ್ತಾಗಿದ್ದು, ಇದರಿಂದ ಮನನೊಂದ ಗಂಗಾಧರ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ತಂದೆಯನ್ನ ಪೊಲೀಸರು ಬಂಧಿಸಿದ್ದು, ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಿಮ್ಮ ಕಾಮೆಂಟ್ ಬರೆಯಿರಿ