ಕೆಜಿಎಫ್‌-2 ಹಾಡು ಬಳಕೆ ಆರೋಪ : ರಾಹುಲ್‌ ಗಾಂಧಿ ವಿರುದ್ಧದ ಎಫ್‌ಐಆರ್‌ ವಜಾ ಮಾಡಲು ಹೈಕೋರ್ಟ್‌ ನಕಾರ

ಬೆಂಗಳೂರು : ಭಾರತ್ ಜೋಡೋ ಯಾತ್ರೆಯ ಪ್ರಚಾರದ ವೀಡಿಯೊಕ್ಕೆ ಕೆಜಿಎಫ್‌-2 ಕನ್ನಡ ಸಿನಿಮಾದ ಮುದ್ರಿತ ಸಂಗೀತವನ್ನು ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಜೈರಾಮ ರಮೇಶ ಮತ್ತು ಸುಪ್ರಿಯಾ ಶ್ರೀನಾಥೆ ಅವರ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ವಜಾ ಮಾಡಲು ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ಕಾಂಗ್ರೆಸ್‌ ಮುಖಂಡರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜೂನ್‌ 23ರಂದು ನಡೆಸಿದ್ದ ಕೋರ್ಟ್‌ ಆದೇಶ ಕಾಯ್ದಿರಿಸಿತ್ತು.
ಅರ್ಜಿದಾರರು ಅನುಮತಿ ಪಡೆಯದೇ ಸೋರ್ಸ್‌ ಕೋಡ್‌ ತಿರುಚಿದ್ದು (ಟ್ಯಾಂಪರ್‌), ಅದನ್ನು ಬಳಕೆ ಮಾಡಿರುವುದು ಕೃತಿಸ್ವಾಮ್ಯದ ಉಲ್ಲಂಘನೆಗೆ ಸಮನಾಗಿದೆ. ಅರ್ಜಿದಾರರು ದೂರುದಾರರ ಕೃತಿಸ್ವಾಮ್ಯವನ್ನು ಲಘುವಾದ ರೀತಿಯಲ್ಲಿ ಬಳಕೆ ಮಾಡಿದ್ದು, ಇದು ಮೇಲ್ನೋಟಕ್ಕೆ ಸಾಕ್ಷ್ಯ ಪರಿಶೀಲಿಸಬೇಕಾದ ಪ್ರಕರಣವಾಗಿದ್ದು, ತನಿಖೆಯಿಂದ ಹೊರಬರಬೇಕಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಪಕ್ಷದ ‘ಭಾರತ ಜೋಡೋ ಯಾತ್ರೆ’ ಸಮಯದಲ್ಲಿ ಕನ್ನಡದ ಚಲನಚಿತ್ರ ಕೆಜಿಎಫ್-2 ಹಾಡನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ ರಮೇಶ ಮತ್ತು ಸುಪ್ರಿಯಾ ಶ್ರೀನಾಥೆ ವಿರುದ್ಧ ಸಂಗೀತ ಕಂಪನಿ ಎಂಆರ್‌ಟಿ ಮ್ಯೂಸಿಕ್ ಎಫ್‌ಐಆರ್ ದಾಖಲಿಸಿತ್ತು.

ಪ್ರಮುಖ ಸುದ್ದಿ :-   ಅಶ್ಲೀಲ‌ ವೀಡಿಯೊ ಇಟ್ಟುಕೊಳ್ಳುವುದು ಅಪರಾಧ, ಡಿಲೀಟ್‌ ಮಾಡಿ : ಎಸ್‌ಐಟಿ ಮುಖ್ಯಸ್ಥರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement