ಬೆಳ್ಳಂಬೆಳಿಗ್ಗೆ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು : ಇಂದು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಯುತ್ತಿದೆ.
ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು, ಬೆಳಗಾವಿ, ರಾಮನಗರ, ಬಾಗಲಕೋಟೆ, ಚಿಕ್ಕಮಗಳೂರು, ತುಮಕೂರು ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಕೆ.ಆರ್​​.ಪುರಂ ತಹಶೀಲ್ದಾರ​ ಅಜಿತ್​​ ರೈ ಮನೆ ಸೇರಿದಂತೆ 10 ಕಡೆ ಲೋಕಾಯುಕ್ತ ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಯುತ್ತಿದೆ. ಅಜಿತ್ ಅವರು ಕೆಲ ದಿನಗಳ ಹಿಂದೆ ಕೆ.ಆರ್​.ಪುರಂನಿಂದ ವರ್ಗಾವಣೆಯಾಗಿದ್ದರು.
ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ ‌ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ ಬಹುರೂಪಿ ಮನೆ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಶೇಖರ್ ಬಹುರೂಪಿ ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 2019ರಲ್ಲಿ ಅಥಣಿಯಲ್ಲಿ ಕಾರ್ಯನಿರ್ವಹಿಸುವಾಗ ಪ್ರವಾಹದ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ ಅಮಾನತುಗೊಂಡಿದ್ದರು.

ಪ್ರಮುಖ ಸುದ್ದಿ :-   ಈಜಲು ತೆರಳಿದ್ದ ನಾಲ್ವರು ಬಾಲಕರು ನೀರುಪಾಲು

ಬಾಗಲಕೋಟೆ ಕೃಷಿ ಜೆಡಿ ಚೇತನಾ ಪಾಟೀಲ ಅವರ ಮನೆ ಮೇಲೆಯೂ ಲೋಕಾಯುಕ್ತ ದಾಳಿ ಮಾಡಿದೆ. ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಚೇತನಾ ಪಾಟೀಲ ಮನೆಯಲ್ಲಿ ಎರಡು ಆಮೆಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಅಲ್ಲದೆ, ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರು ಮನೆಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಅವರ ನಿವಾಸ ಹಾಗೂ ಫಾರಂ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಶಂಕರಪುರದಲ್ಲಿರುವ ನಿವಾಸ ಹಾಗೂ ರಾಮನಗರದ ಫಾರಂ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಗಂಗಾಧರ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ ಹಾಗೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಕೋಲಾರದಲ್ಲಿ KRDL ಎಇಇ ಕೋದಂಡರಾಮಯ್ಯ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಅವರ ಕಲಬುರಗಿಯ ನಾಗನಹಳ್ಳಿ-ಖಣದಾಳ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಹಾಗೂ ಸಿಂಧನೂರು ಪಟ್ಟಣದ ಕಚೇರಿ ಮತ್ತು ಮನೆ ಹಾಗೂ ಮೇಲೆ ದಾಳಿ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಬೆಳಗಾವಿ; ಟಿಕೆಟ್​ ತೋರಿಸು ಎಂದಿದ್ದಕ್ಕೆ ರೈಲಿನಲ್ಲಿ ಟಿಸಿ ಸೇರಿ ಐವರ ಮೇಲೆ ಮುಸುಕುಧಾರಿಯಿಂದ ಹಲ್ಲೆ, ಓರ್ವ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement