ಪ್ರಯಾಗರಾಜ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶುಕ್ರವಾರ ಪ್ರಯಾಗರಾಜದಲ್ಲಿರುವ ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಅಹ್ಮದನಿಂದ ವಶಪಡಿಸಿಕೊಳ್ಳಲಾದ ಭೂಮಿಯಲ್ಲಿ ನಿರ್ಮಿಸಲಾದ 76 ಫ್ಲಾಟ್‌ಗಳ ಕೀಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ.
ಎರಡು ತಿಂಗಳ ಹಿಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಅತೀಕ್ ಅಹ್ಮದ್ ಕೊಲೆಯಾಗಿದ್ದ. ಶುಕ್ರವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಶಪಡಿಸಿಕೊಂಡ ಭೂಮಿಯಲ್ಲಿ ನಿರ್ಮಿಸಲಾದ ವಸತಿ ಸೊಸೈಟಿ ಉದ್ಘಾಟಿಸಿದರು ಮತ್ತು ಫಲಾನುಭವಿಗಳಿಗೆ ಮನೆಗಳ ಕೀಗಳನ್ನು ಹಸ್ತಾಂತರಿಸಿದರು. ಈ ಫ್ಲ್ಯಾಟ್‌ಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ, “2017 ರ ಮೊದಲು, ಯಾವುದೇ ಮಾಫಿಯಾ ಬಡವರ ಭೂಮಿಯನ್ನು ವಶಪಡಿಸಿಕೊಳ್ಳಬಹುದಿತ್ತು, ಅವರನ್ನು ಅಸಹಾಯಕರನ್ನಾಗಿ ಮಾಡಬಹುದಿತ್ತು. ಆದರೆ ಈಗ, ಅಂತಹ ಮಾಫಿಯಾಗಳು ಮತ್ತು ರೌಡಿಗಳಿಂದ ಮುಕ್ತವಾದ ಭೂಮಿಯಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಪ್ರತಿ ಫ್ಲಾಟ್ 300 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಇದರ ಬೆಲೆ 7.5 ಲಕ್ಷ ರೂ., ಆದರೆ ಫಲಾನುಭವಿಗಳು ಪಿಎಂಎವೈ ಯೋಜನೆಯಡಿ ಕೇವಲ 3.5 ಲಕ್ಷ ರೂ. ಮಾತ್ರ ಪಾವತಿಸಬೇಕು. ಈ ಯೋಜನೆಯಡಿ 6,000 ಕ್ಕೂ ಹೆಚ್ಚು ಜನರು ಮನೆಗಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 1600 ಜನರಿಗೆ ಲಾಟರಿ ವ್ಯವಸ್ಥೆಯ ಮೂಲಕ ಫ್ಲ್ಯಾಟ್ ಹಂಚಿಕೆ ಮಾಡಲಾಗಿದೆ.
ಸಮಾರಂಭದಲ್ಲಿ ಯೋಗಿ ಆದಿತ್ಯನಾಥ ಬಡವರಿಗೆ ಫ್ಲ್ಯಾಟ್‌ಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು. 10,000 ಜನರ ಸಾಮರ್ಥ್ಯದ ಸಮಾವೇಶ ಕೇಂದ್ರದ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲು ಅವರು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಣೆಗಾರಿಕೆ ವಹಿಸಿದರು.
ಅಧಿಕಾರ ವಹಿಸಿಕೊಳ್ಳುವ ಮೊದಲು ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ, ಆರು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಒಬ್ಬ ಬಡವರಿಗೂ ಮನೆ ಸಿಗಲಿಲ್ಲ. 2014ರ ನಂತರ ಕೇಂದ್ರದಲ್ಲಿ ಮೋದಿಯವರ ಸರ್ಕಾರ ಇತ್ತು. ಆದರೆ ಅಂದಿನ ರಾಜ್ಯ ಸರ್ಕಾರವು ಜನರಿಗೆ ವಸತಿ ನೀಡಲು ಬಯಸಲಿಲ್ಲ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ