ರಾತ್ರಿ ವೇಳೆ ವಿಶೇಷ ವಿಚಾರಣೆ ನಡೆಸಿ ತೀಸ್ತಾ ಸೆತಲ್ವಾಡಗೆ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್ : ಗುಜರಾತ್ ಹೈಕೋರ್ಟ್ ಆದೇಶಕ್ಕೆ ತಡೆ

ನವದೆಹಲಿ: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶನಿವಾರ ಏಳು ದಿನಗಳ ಮಧ್ಯಂತರ ರಕ್ಷಣೆ ನೀಡಿದೆ ಮತ್ತು ಗುಜರಾತ್ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿದೆ.
ಆಕೆಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ನಂತರ ಸೆತಲ್ವಾಡ್ ಅವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಸುಳ್ಳು ಸೃಷ್ಟಿಸಿದ ಆರೋಪವನ್ನು ಸೆತಲ್ವಾಡ್ ಎದುರಿಸುತ್ತಿದ್ದಾರೆ. ಶನಿವಾರ ಗುಜರಾತ್ ಹೈಕೋರ್ಟ್ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು ಮತ್ತು ತಕ್ಷಣವೇ ಶರಣಾಗುವಂತೆ ಸೂಚಿಸಿತ್ತು.
ಸೆತಲ್ವಾಡ್ ಅವರು ಸುಪ್ರೀಂಕೋರ್ಟ್‌ ಮೊರೆ ಹೋದ ನಂತರ ವಿಚಾರಣೆ ಕೈಗೆತ್ತಿಕೊಂಡ ದ್ವಿಸದಸ್ಯ ಪೀಠಕ್ಕೆ ಸಹಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ ಮತ್ತು ದೀಪಂಕರ ದತ್ತಾ ಅವರ ತ್ರಿಸದಸ್ಯ ಪೀಠವು ಸೆತಲ್ವಾಡ್ ಅವರ ಪ್ರಕರಣವನ್ನು ತಡರಾತ್ರಿಯ ವಿಶೇಷ ವಿಚಾರಣೆಯಲ್ಲಿ ಆಲಿಸಿತು.
ಸೆಪ್ಟೆಂಬರ್ 2022 ರಲ್ಲಿ ಸುಪ್ರೀಂ ಕೋರ್ಟ್ ಸೆತಲ್ವಾಡ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು, ನಂತರ ಅವರು ಗುಜರಾತ್‌ನ ಸಾಬರಮತಿ ಜೈಲಿನಿಂದ ಬಿಡುಗಡೆಯಾದರು. ಸುಪ್ರೀಂ ಕೋರ್ಟ್‌ನ ಮಧ್ಯಂತರ ಜಾಮೀನು ಸೆತಲ್ವಾಡ್ ಅವರನ್ನು ಇಲ್ಲಿಯವರೆಗೆ ಬಂಧನದಿಂದ ರಕ್ಷಿಸಿತ್ತು. ನಿಯಮಿತ ಜಾಮೀನಿಗಾಗಿ ಆಕೆ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಶನಿವಾರ ಬೆಳಗ್ಗೆ ಗುಜರಾತ್ ಹೈಕೋರ್ಟ್ ತೀಸ್ತಾ ಸೆತಲ್ವಾಡ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು ಮತ್ತು “ತಕ್ಷಣ ಶರಣಾಗುವಂತೆ” ಸೂಚಿಸಿತು.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ನಂತರ ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ಸೆತಲ್ವಾಡ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಅಭಯ ಎಸ್. ಓಕಾ ಮತ್ತು ಪ್ರಶಾಂತಕುಮಾರ ಮಿಶ್ರಾ ಅವರ ದ್ವಿಸದಸ್ಯ ಪೀಠವು ಸಂಜೆ 6:30 ಕ್ಕೆ ಪ್ರಕರಣವನ್ನು ಆಲಿಸಿತು. ಇಬ್ಬರು ನ್ಯಾಯಾಧೀಶರು ಸಹಮತಕ್ಕೆ ಬರದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಯಿತು.
ಆಕೆಯನ್ನು ತಕ್ಷಣವೇ ಶರಣಾಗುವಂತೆ ಹೈಕೋರ್ಟ್ ಏಕೆ ಆದೇಶಿಸಿದೆ ಎಂದು ಪ್ರಶ್ನಿಸಿದ ಇಬ್ಬರು ನ್ಯಾಯಾಧೀಶರು ಸೆತಲ್ವಾಡ್‌ಗೆ ಸ್ವಲ್ಪ ಕಾಲಾವಕಾಶ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ವಿಶೇಷ ವಿಚಾರಣೆಯಲ್ಲಿ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ ಮತ್ತು ದೀಪಂಕರ ದತ್ತಾ ಅವರ ತ್ರಿಸದಸ್ಯ ಪೀಠವು ಸೆತಲ್ವಾಡ್ ಅವರ ಪ್ರಕರಣವನ್ನು ರಾತ್ರಿ 9:15ರ ಸುಮಾರಿಗೆ ಆಲಿಸಿತು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ, ಪೀಠವು ಗುಜರಾತ್ ಹೈಕೋರ್ಟ್‌ನ ಆದೇಶಕ್ಕೆ ತಡೆಯಾಜ್ಞೆ ನೀಡಿತು ಮತ್ತು ತೀಸ್ತಾಗೆ ಏಳು ದಿನಗಳ ಕಾಲ ಮಧ್ಯಂತರ ರಕ್ಷಣೆ ನೀಡಿತು.
ತೀಸ್ತಾ ಸೆತಲ್ವಾಡ್ ಅವರು ಕಾನೂನಿನ ಅಡಿಯಲ್ಲಿ ಮಹಿಳೆಯಾಗಿ “ವಿಶೇಷ ರಕ್ಷಣೆ”ಗೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೈಕೋರ್ಟ್ ತನ್ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಯ ನೀಡದಿರಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

ಸೆತಲ್ವಾಡ್ ವಿರುದ್ಧದ ಪ್ರಕರಣವೇನು?
ತೀಸ್ತಾ ಸೆತಲ್ವಾಡ್ ಮತ್ತು ಗುಜರಾತಿನ ಮಾಜಿ ಪೊಲೀಸ್‌ ಉನ್ನತಾಧಿಕಾರಿ ಆರ್‌.ಬಿ ಶ್ರೀಕುಮಾರ ಅವರನ್ನು ಸುಳ್ಳು ಸಾಕ್ಷ್ಯಾಧಾರ ಸೃಷ್ಟಿ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಮಾಡಿದ ಆರೋಪದ ಮೇಲೆ ಬಂಧಿಸಲಾಯಿತು. 2002 ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದ ನಂತರ ತೀಸ್ತಾ ಸೆಪ್ಟೆಂಬರ್ 2022 ರಲ್ಲಿ ಗುಜರಾತ್‌ನ ಸಬರಮತಿ ಜೈಲಿನಿಂದ ಬಿಡುಗಡೆಯಾದರು.
ಗುಜರಾತ್ ಎಟಿಎಸ್ ಸಲ್ಲಿಸಿದ ಎಫ್‌ಐಆರ್‌ನಲ್ಲಿ ತೀಸ್ತಾ ಸೆತಲ್ವಾಡ್ ಸಾಕ್ಷಿಗಳ ಸುಳ್ಳು ಹೇಳಿಕೆಗಳನ್ನು ಸೃಷ್ಟಿಸಿದ್ದಾರೆ ಮತ್ತು ಗಲಭೆಗಳ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗದ ಮುಂದೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಎಫ್‌ಐಆರ್ ಪ್ರಕಾರ, ಸೆತಲ್ವಾಡ್ ಮತ್ತು ಶ್ರೀಕುಮಾರ ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸುವ ಮೂಲಕ ಮತ್ತು ಅಮಾಯಕರ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement