ಮುಂಬೈ: ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಎನ್‌ಸಿಪಿ ನಾಯಕ ಹಾಗೂ ಶರದ ಪವಾರ್ ಅವರ ಅಣ್ಣನ ಮಗ ಅಜಿತ ಪವಾರ್ ಅವರು ಶಿವಸೇನೆಯ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಬಿಜೆಪಿಯ ಡಿಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದ ಎನ್‌ಡಿಎ ಸರ್ಕಾರ ಸೇರಿದ ಬೆನ್ನಲ್ಲೇ ಅವರ ಬದಲಿಗೆ ಜಿತೇಂದ್ರ ಅವ್ಹಾದ್ ಅವರನ್ನು ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರನ್ನಾಗಿ ಎನ್‌ಸಿಪಿ ನೇಮಕ ಮಾಡಿದೆ.
ಈ ಬಗ್ಗೆ ಸಭಾಪತಿ ಅವರಿಗೆ ಶರದ ಪವಾರ್ ಪತ್ರ ಬರೆದಿದ್ದಾರೆ. 59 ವರ್ಷ ವಯಸ್ಸಿನ ಜಿತೇಂದ್ರ ಅವ್ಹಾದ್ ಅವರು ಮೂರು ದಶಕಗಳ ಕಾಲ ರಾಜಕೀಯದಲ್ಲಿದ್ದಾರೆ. ಥಾಣೆಯ ಮುಂಬ್ರಾ-ಕಲ್ವಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು, ಪೃಥ್ವಿರಾಜ ಚವ್ಹಾಣ ನೇತೃತ್ವದ ಸರ್ಕಾರದ ಅಡಿಯಲ್ಲಿ 2014 ರಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ತೋಟಗಾರಿಕೆ ಸಚಿವ ಖಾತೆ ಸೇರಿದಂತೆ ಮಹಾರಾಷ್ಟ್ರ ಸರ್ಕಾರದಲ್ಲಿ ವಿವಿಧ ಸಚಿವ ಸ್ಥಾನಗಳನ್ನು ನಿರ್ವಹಿಸಿದ್ದಾರೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ 2019 ರಿಂದ 2022 ರವರೆಗೆ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವರಾಗಿದ್ದರು. .
ಮೆರೈನ್ ಇಂಜಿನಿಯರಿಂಗ್ ಓದಿರುವ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಸಿಬ್ಬಂದಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅದೇ ಸಂಸ್ಥೆಯಿಂದ ಡಾಕ್ಟರೇಟ್ ಪಡೆದಿದ್ದಾರೆ. ಅವರು ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು, ಮಹಾರಾಷ್ಟ್ರ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಶರದ್ ಪವಾರ್ ಎನ್‌ಸಿಪಿ ಸ್ಥಾಪಿಸಿದಾಗ, ಅವ್ಹಾದ್ ಅವರು ಪಕ್ಷಕ್ಕೆ ಸೇರಿದರು.
ಇದಕ್ಕೂ ಮೊದಲು ಇಂದು ಭಾನುವಾರ (ಜುಲೈ 2) ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿದ್ದು, ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಕೆಲ ನಾಯಕರು ಮತ್ತು ಶಾಸಕರ ಸಭೆ ನಡೆಸಿದ ನಂತರ ಎನ್‌ಸಿಪಿ ಹಿರಿಯ ನಾಯಕ ಅಜಿತ ಪವಾರ್ ನಂತರ ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆಯಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಜಿತ್ ಪವಾರ್ ತಮಗೆ ಎನ್ಸಿಪಿಯ 40 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದು ಇವರ ಜೊತೆ ಇತರ 8 ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಛಗನ್ ಭುಜಬಲ್, ಧನಂಜಯ ಮುಂಡೆ, ದಿಲೀಪ ವಾಲ್ಸೆ ಪಾಟೀಲ, ಹಸನ್ ಮುಶ್ರಿಫ್, ಧರ್ಮರಾವ್ ಬಾಬಾ ಅತ್ರಂ, ಅದಿತಿ ತತ್ಕರೆ, ಅನಿಲ ಪಾಟೀಲ್ ಮತ್ತು ಸಂಜಯ್ ಬನ್ಸೋಡೆ- ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಇತರ ಎನ್‌ಸಿಪಿ ಶಾಸಕರಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ