ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಸೋಮವಾರದಿಂದ (ಜುಲೈ 3) ಆರಂಭವಾಗಲಿದೆ. ವರ್ಷಾರಂಭದ ಜಂಟಿ ಅಧಿವೇಶನ ಕಳೆದ ಫೆಬ್ರವರಿಯಲ್ಲಿ ನಡೆದಿತ್ತಾದರೂ, ನೂತನ ಸರ್ಕಾರದ ಗೊತ್ತುಗುರಿ ಬಗ್ಗೆ ರಾಜ್ಯಪಾಲರು ಮತ್ತೊಮ್ಮೆ ಜುಲೈ 3ರಂದು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 7ರಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023 -24ನೇ ಸಾಲಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸದ್ಯದ ತೀರ್ಮಾನದಂತೆ ಜುಲೈ 14 ರವರೆಗೆ ಅಧಿವೇಶನ ನಡೆಯಲಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಲವು ವಿಧೇಯಕಗಳನ್ನು ಹಿಂಪಡೆಯುವ ಸರ್ಕಾರದ ತೀರ್ಮಾನ ಹಾಗೂ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದಲ್ಲಿನ ಗೊಂದಲ ಮತ್ತು ಷರತ್ತುಗಳ ವಿರುದ್ಧ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ವೈಫಲ್ಯದ ವಿರುದ್ಧ ಸದನದ ಒಳಗೆ ವಿಪಕ್ಷದ ಹೋರಾಟದ ರೂಪುರೇಷೆ ಕೂಡ ಸಿದ್ಧವಾಗಿದೆ.
ಆದರೆ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ ಅವರಂತಹ ಹಿರಿಯ ನಾಯಕರ ಅನುಪಸ್ಥಿತಿ ಬಿಜೆಪಿಯನ್ನು ಈ ಬಾರಿ ಕಾಡಲಿದೆ.
11 ಕಾನೂನು ತಿದ್ದುಪಡಿ ವಿಧೇಯಕಗಳನ್ನು ಅಧಿವೇಶನದಲ್ಲಿ ಮಂಡನೆ ಮಾಡಲು ಸರ್ಕಾರ ಪಟ್ಟಿ ಮಾಡಿದೆ. ವಿವಾದಿತ ಕೃಷಿ ಕಾಯಿದೆ ಹಾಗೂ ಗೋಹತ್ಯೆ ನಿಷೇಧ ಕಾಯಿದೆ ವಾಪಸ್ ಮತ್ತಿತರ ಕಾನೂನು ತಿದ್ದುಪಡಿಗಳನ್ನೂ ಇದೇ ಅಧಿವೇಶನದಲ್ಲಿ ತರಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ಸಿದ್ಧತೆಯಲ್ಲಿ ತೊಡಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ