ಎಸ್‌ಸಿಒ ಶೃಂಗಸಭೆ : ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲಿ ಭಯೋತ್ಪಾದನೆ ಕುರಿತು ಪ್ರಬಲ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಶಾಂಘೈ ಸಹಕಾರ ಸಂಸ್ಥೆಯನ್ನು (SCO) ಭಾರತವು ವರ್ಚುವಲ್‌ ನಲ್ಲಿ ಆಯೋಜಿಸಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಜೂನ್ ಅಂತ್ಯದಲ್ಲಿ ವ್ಯಾಗ್ನರ್ ಗುಂಪಿನ ದಂಗೆ ಹತ್ತಿಕ್ಕಿದಾಗಿನಿಂದ ಪುತಿನ್ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಶಾಂಘೈ ಸಹಕಾರ ಸಂಘಟನೆ (SCO) ಯುರೇಷಿಯಾದ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಶಾಂಘೈ ಸಹಕಾರ ಸಂಸ್ಥೆಯಲ್ಲಿ (SCO) ಪ್ರಧಾನಿ ನರೇಂದ್ರ ಮೋದಿ ಅವರು ಗಡಿಯಾಚೆಗಿನ ಭಯೋತ್ಪಾದನೆಯನ್ನು ಟೀಕಿಸಿದರು ಮತ್ತು “ಭಯೋತ್ಪಾದನೆ-ಹಣಕಾಸು ನೆರವು ನಿಲ್ಲಿಸಲು ದೇಶಗಳು ಸಹಕರಿಸಬೇಕು” ಎಂದು ಕೋರಿದರು.
ಭಯೋತ್ಪಾದನೆಯು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಬೆದರಿಕೆಯಾಗಿದೆ. ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗುತ್ತದೆ…ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಮ್ಮ ನೀತಿಗಳ ಸಾಧನವಾಗಿ ಬಳಸುತ್ತವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ. ಅಂತಹ ದೇಶಗಳನ್ನು ಟೀಕಿಸಲು ಎಸ್‌ಸಿಒ (SCO) ಹಿಂಜರಿಯಬಾರದು. ಎಸ್‌ಸಿಒ ದೇಶಗಳು ಇದನ್ನು ಖಂಡಿಸಬೇಕು, ಭಯೋತ್ಪಾದನೆ ವಿಚಾರದಲ್ಲಿ ದ್ವಂದ್ವ ನೀತಿ ಇರಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಉಪಸ್ಥಿತಿಯಲ್ಲಿಯೇ ಪ್ರಧಾನಿ ಮೋದಿ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ಎದುರಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ಭಾರತದ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಇರಾನ್ ನಾಯಕರು ಸಹ ಭಾಗವಹಿಸಿದ್ದರು.
ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ ಅವರು ವಿವಿಧ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಿದರು. ವಿವಾದಗಳು, ಉದ್ವಿಗ್ನತೆ ಮತ್ತು ಸಾಂಕ್ರಾಮಿಕ ರೋಗಗಳಿಂದ ಸುತ್ತುವರೆದಿರುವ ವಿಶ್ವದ ಎಲ್ಲಾ ದೇಶಗಳಿಗೆ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟು ದೊಡ್ಡ ಸವಾಲಾಗಿದೆ ಮತ್ತು ಅದನ್ನು ಎದುರಿಸಲು ಒಗ್ಗಟ್ಟಿನ ಪ್ರಯತ್ನಗಳು ಇರಬೇಕು ಎಂದು ಅವರು ಹೇಳಿದರು.
ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಆ ದೇಶದ ಬಗ್ಗೆ ಭಾರತದ ಕಾಳಜಿ ಮತ್ತು ನಿರೀಕ್ಷೆಗಳು ಹೆಚ್ಚಿನ SCO ದೇಶಗಳಂತೆಯೇ ಇವೆ. ಈ ಪ್ರದೇಶದೊಂದಿಗೆ (ಯುರೇಷಿಯಾ) ಭಾರತದ ಸಾವಿರಾರು ವರ್ಷಗಳ ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು ನಮ್ಮ ಹಂಚಿಕೆಯ ಪರಂಪರೆಗೆ ಜೀವಂತ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಎಸ್‌ಸಿಒ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತವು ನಮ್ಮ ಬಹುಮುಖಿ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರಂತರ ಪ್ರಯತ್ನಗಳನ್ನು ಮಾಡಿದೆ. ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆ, ಸಾಂಪ್ರದಾಯಿಕ ಔಷಧ, ಯುವ ಸಬಲೀಕರಣ, ಡಿಜಿಟಲ್ ಸೇರ್ಪಡೆ ಮತ್ತು ಬೌದ್ಧಿಕ ಪರಂಪರೆಯನ್ನು ಹಂಚಿಕೊಂಡಿರುವ ಎಸ್‌ಸಿಒನಲ್ಲಿ ಭಾರತವು ಐದು ಸಹಕಾರದ ಸ್ತಂಭಗಳನ್ನು ಸ್ಥಾಪಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. SCO ಯ ಸುಧಾರಣೆ ಮತ್ತು ಆಧುನೀಕರಣದ ಪ್ರಸ್ತಾಪವನ್ನು ಭಾರತ ಬೆಂಬಲಿಸುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

ಇರಾನ್ ಎಸ್‌ಸಿಒ ಕುಟುಂಬಕ್ಕೆ ಹೊಸ ಸದಸ್ಯನಾಗಿ ಸೇರ್ಪಡೆಯಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದರು ಹಾಗೂ ಬೆಲಾರಸ್‌ನ SCO ಸದಸ್ಯತ್ವಕ್ಕಾಗಿ ಜ್ಞಾಪಕ ಪತ್ರಕ್ಕೆ ಸಹಿ ಹಾಕಿರುವುದನ್ನು ಪ್ರಧಾನಿ ಸ್ವಾಗತಿಸಿದರು. ಜನರಿಂದ ಜನರ ಸಂಪರ್ಕವನ್ನು ಇನ್ನಷ್ಟು ಗಾಢಗೊಳಿಸುವ ಉದ್ದೇಶದಿಂದ ಭಾರತದ ಅಧ್ಯಕ್ಷತೆ ಅಡಿಯಲ್ಲಿ ಹಲವಾರು ಸಹಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಶಾಂಘೈ ಸಹಕಾರ ಸಂಸ್ಥೆ(SCO)ಯೊಂದಿಗೆ ಭಾರತದ ಸಹಯೋಗವು 2005ರಲ್ಲಿ ವೀಕ್ಷಕ ರಾಷ್ಟ್ರವಾಗಿ ಪ್ರಾರಂಭವಾಯಿತು. 2017 ರಲ್ಲಿ ಅಸ್ತಾನಾ ಶೃಂಗಸಭೆಯಲ್ಲಿ ಭಾರತವು ಸಂಘಟನೆಯ ಪೂರ್ಣ ಸದಸ್ಯ ರಾಷ್ಟ್ರವಾಯಿತು. ಭಾರತವು SCO ಮತ್ತು ಅದರ ಪ್ರಾದೇಶಿಕ ಭಯೋತ್ಪಾದನೆ-ವಿರೋಧಿ ರಚನೆ (RATS)ಯೊಂದಿಗೆ ತನ್ನ ಭದ್ರತೆ-ಸಂಬಂಧಿತ ಸಹಕಾರವನ್ನು ಗಟ್ಟಿಗೊಳಿಸುವಲ್ಲಿ ತೀವ್ರ ಆಸಕ್ತಿ ತೋರಿಸಿದೆ, ಇದು ನಿರ್ದಿಷ್ಟವಾಗಿ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ವಿಷಯಗಳೊಂದಿಗೆ ವ್ಯವಹರಿಸುತ್ತದೆ.
2001 ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ರಿಪಬ್ಲಿಕ್, ಕಝಾಕಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು ಶಾಂಘೈ ಸಹಕಾರ ಸಂಸ್ಥೆ(ಎಸ್‌ಸಿಒ) ಸ್ಥಾಪಿಸಿದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement