ಅಕ್ಕರೆಯಿಂದ ಅಕ್ಷರದ ದಾಹ ತಣಿಸುವ ಹುಬ್ಬಳ್ಳಿಯ ಸಪ್ನ ಬುಕ್ ಹೌಸ್‌ ಗೆ ದಶಮಾನೋತ್ಸವ ಸಂಭ್ರಮ

(  ಹುಬ್ಬಳ್ಳಿ ಸ್ವಪ್ನ ಬುಕ್ ಹೌಸ ದಶಮಾನೋತ್ಸವ ಸಂಭ್ರಮದಲ್ಲಿದ್ದು, ಆ ನಿಮಿತ್ತ ಲೇಖನ)
ಸಮಾಜದಲ್ಲಿ ಜ್ಞಾನವಂತರ ಸಂಖ್ಯೆ ಹೆಚ್ಚಿಸುವ ಧ್ಯೇಯದಿಂದ ೧೯೬೭ ರಲ್ಲಿ ಆರಂಭವಾದ ಸಪ್ನ ಬುಕ್ ಹೌಸ್‌ಇಂದು ಬೃಹದಾಕಾರವಾಗಿ ಬೆಳೆದಿದೆ. ಬೆಂಗಳೂರಿನಲ್ಲಿ ೧೦ x ೧೦ ರ ಅಳತೆಯ ಮಳಿಗೆಯಲ್ಲಿ ಪ್ರಾರಂಭವಾಯಿತು. ಇಂದು ೧೯ ಶಾಖೆಗಳೊಂದಿಗೆ ಓದುಗರಿಗೆ ಸೇವೆ ನೀಡುತ್ತಿದೆ. ೬೦೦೦ಕ್ಕೂ ಹೆಚ್ಚಿನ ಕನ್ನಡ ಪುಸ್ತಕಗಳನ್ನು ಮತ್ತು ೬೫೦ಕ್ಕೂ ಹೆಚ್ಚಿನ ಪಠ್ಯಪುಸ್ತಕಗಳನ್ನು ಪ್ರಕಟಿಸಿದೆ.
ಸ್ವಪ್ನಾ ಬುಕ್‌ಹೌಸ್‌೬೦೦೦ಕ್ಕೂ ಹೆಚ್ಚಿನ ಕನ್ನಡ ಪುಸ್ತಕಗಳನ್ನು ಮತ್ತು ೬೫೦ಕ್ಕೂ ಹೆಚ್ಚಿನ ಪಠ್ಯಪುಸ್ತಕಗಳನ್ನು ಪ್ರಕಟಿಸಿದೆ. ಏಷ್ಯಾ ಖಂಡದಲ್ಲಿಯೇ ೩ ಲಕ್ಷ ಚದರ ಅಡಿಗಳ ವಿಸ್ತೀರ್ಣ ಹೊಂದಿರುವ ಪುಸ್ತಕ ಭಂಡಾರವೆಂಬ ಹೆಗ್ಗಳಿಕೆ ಇರುವ ಇದು ೧.೨ ಕೋಟಿಗೂ ಹೆಚ್ಚಿನ ಗ್ರಾಹಕರ ಜಾಲ ಹೊಂದಿದೆ. ಅಕ್ಷರ ಕ್ಷೇತ್ರದಲ್ಲಿ ಗಣನೀಯ ಸೇವೆ ಗುರುತಿಸಿ ಸಂಸ್ಥೆಗೆ ರಾಜ್ಯ ಸರ್ಕಾರವು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿದೆ. ಪುಸ್ತಕ ಪ್ರಕಾಶನ ಕ್ಷೇತ್ರದ ಸಂಸ್ಥೆಯೊಂದು ಮೊದಲ ಬಾರಿಗೆ ಈ ಪ್ರಶಸ್ತಿಗೆ ಭಾಜನವಾಗಿದೆ. ಇದಲ್ಲದೆ ʼಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌’ ಮತ್ತು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌‌ʼ ನಲ್ಲಿ ಸಪ್ನ ಬುಕ್ ಹೌಸ್‌ಭಾರತದ ಅತಿ ದೊಡ್ಡ ಪುಸ್ತಕ ಭಂಡಾರ ಎಂಬ ದಾಖಲೆ ಬರೆದಿದೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’, ನವದೆಹಲಿಯ ಎಫ್.ಪಿ.ಬಿ.ಎ. ಸಂಸ್ಥೆಯಿಂದ ‘ದಕ್ಷಿಣ ಭಾರತದ ಅತ್ಯುತ್ತಮ ಪುಸ್ತಕ ಮಾರಾಟಗಾರರು’ ಪ್ರಶಸ್ತಿ ಪಡೆದಿರುವ ಸಂಸ್ಥೆ, ಓದುಗರಿಗೆ ಆನ್‌ಲೈನ ಹಾಗೂ ಕೊರಿಯರ್‌ಮೂಲಕ ಪುಸ್ತಕಗಳನ್ನು ತಲುಪಿಸುತ್ತಿದೆ.
ಗುಜರಾತ್ ಮೂಲದ ಷಾ ಕುಟುಂಬ ಬೆಂಗಳೂರನ್ನು ಕೇಂದ್ರ ಸ್ಥಾನಮಾಡಿಸಿಕೊಂಡು ಸಪ್ನ ಬುಕ್ ಹೌಸ್‌ಪುಸ್ತಕ ಪ್ರಕಾಶನ ಸಂಸ್ಥೆ ಸ್ಥಾಪಿಸಿದ್ದಾರೆ. ಸುರೇಶ ಷಾ ಅವರು ಆರಂಭಿಸಿದ ಸಪ್ನ ಬುಕ್ ಹೌಸನ್ನು ಅವರ ಮಕ್ಕಳಾದ ನಿತಿನ್, ದೀಪಕ್, ಪರೇಶ ಮತ್ತು ನಿತಿನ್‌ಅವರ ಮಗ ನಿರೇಶ ಅತ್ಯಂತ ಅಚ್ಚುಕಟ್ಟಾಗಿ, ಮತ್ತು ವ್ಯವಸ್ಥಿತವಾಗಿ ನಡೆಸುಕೊಂಡು ಮುನ್ನಡೆಯುತ್ತಿದ್ದಾರೆ. ಓದುಗರೇ ದೇವರು ಎಂಬ ಧ್ಯೇಯದೊಂದಿಗೆ ಷಾ ಕುಟುಂಬ ಮುನ್ನಡೆಯುತ್ತಿದೆ.
ಕನ್ನಡ ಸಾಹಿತ್ಯದ ಪ್ರಕಾರಗಳಾದ ಕಥೆ, ಕಾದಂಬರಿ, ಜೀವನ ಚರಿತ್ರೆ, ನಾಟಕ, ಕಾವ್ಯ, ಪ್ರವಾಸ ಕಥನಗಳ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮಿಕ ಮುಂತಾದ ಪುಸ್ತಕಗಳನ್ನು ಪ್ರಕಟಿಸುವ ಹಾಗೂ ಮಾರಾಟ ಮಾಡುವ ಸಂಸ್ಥೆಯ ೨೦೦೦ಕ್ಕೂ ಹೆಚ್ಚಿನ ಸಿಬ್ಬಂದಿ ಓದುಗರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ.

ಮಕ್ಕಳಿಗೆ ಕುತೂಹಲ ಮೂಡಿಸುವ ಪುಸ್ತಕಗಳು, ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಅಧ್ಯಾತ್ಮಿಕ ಪುಸ್ತಕಗಳು, ಬೇರೆ ಭಾಷೆಗಳು ಅತ್ಯುತ್ತಮ ಪುಸ್ತಕಗಳ ಅನುವಾದಿತ ಕೃತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಮಾರ್ಗದರ್ಶಿ ಪುಸ್ತಕಗಳು, ಆರೋಗ್ಯ ಸಂಬಂಧಿಸಿದ ಪುಸ್ತಕಗಳು ಇಲ್ಲಿ ಲಭ್ಯ. ಅಲ್ಲದೆ ಅತಿ ಹೆಚ್ಚಿ ಬೇಡಿಕೆ ಇರುವ ಪುಸ್ತಕಗಳನ್ನು ಪ್ರದರ್ಶಿಸಲಾಗುತ್ತದೆ.
ಕನ್ನಡ ಸಾಹಿತಿಗಳ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಕೃತಿಗಳ ಆಯೋಜನೆ, ವಿವಿಧ ಸಂದರ್ಭಗಳಿಗೆ ನೀಡುವ ವೈವಿಧ್ಯಮಯ ಸ್ಮರಣಿಕೆಗಳು, ಅಲಂಕಾರಿಕ ವಸ್ತುಗಳು, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ ಅವರ ಬಹುತೇಕ ಕೃತಿಗಳು ಸ್ವಪ್ನಾ ಬುಕ್‌ಹೌಸ್‌ ಮಳಿಗೆಗಳಲ್ಲಿ ಲಭ್ಯ. ಬರವಣಿಗೆ ಸಂಬಂಧಿಸಿದ ಪೆನ್ನು, ಫೈಲು, ಕಾಣಿಕೆ ವಸ್ತುಗಳು, ಆಟದ ವಸ್ತುಗಳು, ಸಿಡಿ, ಆಡಿಯೋ, ನಿಯತಕಾಲಿಕೆಗಳ ವಿಭಾಗ ಗ್ರಾಹಕರನ್ನು ಆಕರ್ಷಿಕರಾಗುವಂತೆ ಮಾಡಿವೆ. ನಗು ಮುಖಗ ಸಿಬ್ಬಂದಿ ಗ್ರಾಹಕರಿಗೆ ವಿವಿಧ ವಿಭಾಗಗಳಿಗೆ ಕರೆದುಕೊಂಡು ಹೋಗಿ, ಅವರಿಗೆ ಸಹಾಯ, ಸೌಲಭ್ಯಗಳನ್ನು ಒದಗಿಸುತ್ತಿರುವುದು ಎಲ್ಲ ಶಾಖೆಗಳ ವೈಶಿಷ್ಟ್ಯ. ವಾರದ ಎಲ್ಲ ದಿನಗಳಲ್ಲಿ ತೆರೆದಿರುತ್ತದೆ.
ಪುಸ್ತಕಗಳ ಪ್ರದರ್ಶನ ಮತ್ತು ಬಿಡುಗಡೆ, ಲೇಖಕರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ, ನಗೆ ಹಬ್ಬ, ನಾಟಕಗಳ ಪ್ರದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ‍್ಯಾಗಾರ ಮುಂತಾದ ರಚನಾತ್ಮಕ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಆಯೋಜಿಸುತ್ತಿದೆ.
ಕನ್ನಡ ಜ್ಞಾನಪೀಠ ಪುರಸ್ಕೃತರ ಪುಸ್ತಕಗಳಲ್ಲದೆ, ಕನ್ನಡ ನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ. ದೇಜಗೌ, ಡಾ. ಎಂ.ಎಂ. ಕಲಬುರ್ಗಿ, ಡಾ. ಎಂ. ಚಿದಾನಂದಮೂರ್ತಿ, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಾ. ಸಾ.ಶಿ. ಮರುಳಯ್ಯ, ಪ್ರೊ. ಕೆ.ಎಸ್. ನಿಸಾರ ಅಹಮದ್, ಡಾ. ಹಂಪನಾ ದಂಪತಿ, ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಗಿರಡ್ಡಿ ಗೋವಿಂದರಾಜ, ಡಾ. ಚನ್ನವೀರ ಕಣವಿ ಮುಂತಾದವರ ಸಮಗ್ರ ಸಂಪುಟಗಳನ್ನು ಪ್ರಕಟಿಸಿದೆ.
ಸಾಹಿತಿಗಳ ಸಮಗ್ರ ಕೃತಿಗಳನ್ನು ಶಾಲಾ-ಕಾಲೇಜುಗಳ ಗ್ರಂಥಾಲಯಕ್ಕೆ ಸರಬರಾಜು ಮಾಡುತ್ತಿರುವ ಈ ಸಂಸ್ಥೆ ೫೦೦ ರೂ. ಸಂದಾಯ ಮಾಡಿದವರಿಗೆ ಸಂಸ್ಥೆಯ ಸದಸ್ಯತ್ವನವನ್ನು ನೀಡಿ, ಸದಸ್ಯರಿಗೆ ಎಲ್ಲ ಮಳಿಗೆಗಳಲ್ಲಿ ಗ್ರಂಥಗಳ ಖರೀದಿಗೆ ವಿಶೇಷ ರಿಯಾಯತಿ ನೀಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದೆ.
ಕನ್ನಡ ವಿಭಾಗ ಮುಖ್ಯಸ್ಥರಾದ ಆರ್. ದೊಡ್ಡೇಗೌಡ ಅವರು ಲೇಖಕರು ಮತ್ತು ಓದುಗರಿಗೆ ಸೃಜನಾತ್ಮಕ ಸೇವೆಯನ್ನು ತಮ್ಮ ಸಿಬ್ಬಂದಿಯೊಂದಿಗೆ ನೀಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ: ಕಚೇರಿಗೆ ತೆರಳಿ ಬಿಜೆಪಿ ಸಂಸದ ಕಾಗೇರಿ ಅಭಿನಂದಿಸಿದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ...!

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಪುಸ್ತಕಗಳ ಪ್ರಕಾಶನ ಹಾಗೂ ಮಾರಾಟದ ಉತ್ತೇಜನಕ್ಕಾಗಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡದ ಶ್ರೇಷ್ಠ ಕೃತಿಗಳ ಪ್ರಕಟಣೆ, ಸಾಹಿತಿಗಳಿಗೆ ಗೌರವ ಸಮರ್ಪಣೆ ಮತ್ತು ಪುಸ್ತಕಗಳಿಗೆ ವಿಶೇಷ ರಿಯಾಯತಿ ನೀಡುವ ಮೂಲಕ ಪುಸ್ತಕೋದ್ಯಮದ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ.
ಪ್ರಕಾಶನ ಕ್ಷೇತ್ರಕ್ಕೆ ಒತ್ತು ಕೊಡುವ ಅಪೇಕ್ಷೆಯಿಂದ ಸಪ್ನ ಸ್ವಇಚ್ಛೆಯಿಂದ ಪುಸ್ತಕಗಳನ್ನು ಪ್ರಕಟಸುವವರಿಗೆ ‘ಸಪ್ನ ಇಂಕ್’ ಎಂಬ ಸ್ವ ಪ್ರಕಾಶನ ಸಂಸ್ಥೆ ಪ್ರಾರಂಭಿಸಿದೆ. ಇದು ಪ್ರಕಾಶನ ಕ್ಷೇತ್ರಕ್ಕೆ ಹೊಸದೊಂದು ಮೈಲಿಗಲ್ಲು. ಅಲ್ಲದೆ, “ಸ್ಟೋರ್-೬೭” ಎಂಬ ಲೇಖನ ಸಾಮಗ್ರಿಗಳ ಅಭೂತಪೂರ್ವ ಹೊಸ ಯೋಜನೆ ಮೂಲಕ ನೋಟ್ ಪುಸ್ತಕಗಳು, ಇತರ ಲೇಖನ ಸಾಮಗ್ರಿಗಳ ಪೂರೈಸುವಿಕೆ, ನವೀನ ಮುದ್ರಿತ ಪುಸ್ತಕಗಳನ್ನು ನೀಡುತ್ತಿದೆ.
ಹುಬ್ಬಳ್ಳಿಯ ಸ್ವಪ್ನ ಬುಕ್ ಹೌಸ್‌ನಲ್ಲಿ ನಿರಂತರವಾದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ, ಇತ್ತೀಚಗಷ್ಟೆ ಕನ್ನಡ ಸಾಹಿತ್ಯ ಸಂಸ್ಕೃತಿ ಇತಿಹಾಸಗಳ ಕುರಿತು ಪ್ರಶ್ನಾವಳಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮತ್ತು ಅದೃಷ್ಟಶಾಲಿಗಳಿಗೆ ಬಹುಮಾನ ನೀಡಲಾಗಿದೆ. ಹಿರಿಯ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ ಮತ್ತು ಕನ್ನಡದಲ್ಲಿ ಆಶು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಈ ಮಳಿಗೆಯಲ್ಲಿ ೩೫ ಸಿಬ್ಬಂದಿ ಇದ್ದಾರೆ. ಈ ಮಳಿಗೆಯ ವಿಶೇಷ ಕೌಂಟರ್ ಒಂದು ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ರೋಗಿಗಳಿಗೆ ಮತ್ತು ಅವರ ಸಂಬಂಧಿಗಳಿಗೆ ಅವಶ್ಯಕವಾದ ವಿಶೇಷ ಪುಸ್ತಕಗಳು ದೊರಕುವಂತೆ ಮಾಡಿದೆ. ಬೇರೆ ಬೇರೆ ಪ್ರಕಾಶಕರ ಮತ್ತು ಲೇಖಕರ ಗ್ರಂಥಗಳು ಈ ಮಳಿಗೆಯಲ್ಲಿ ದೊರೆಯುತ್ತವೆ. ಕನ್ನಡದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್.ಕೌಜಲಗಿ ಮತ್ತು ನಿವೃತ್ತ ಗ್ರಂಥಪಾಲಕ ಸಿ.ವಿ. ಓಂಕಾರಿ ಮಳಿಗೆಯ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪುತ್ತಿವೆ ಎನ್ನುತ್ತಾರೆ.
ಸಂಸ್ಥೆಯ ಹುಬ್ಬಳ್ಳಿ ಮಳಿಗೆ ದಶಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮಳಿಗೆ ಗ್ರಾಹಕರಿಗೆ ಪುಸ್ತಕಗಳ ಖರೀದಿಗೆ ೧೦% ಮತ್ತು ಇತರೆ ಖರೀದಿಗಳಿಗೆ ೫% ರಿಯಾಯತಿ ನೀಡುತ್ತದೆ ಎನ್ನುತ್ತಾರೆ ಶಾಖಾ ವ್ಯವಸ್ಥಾಪಕರಾದ ಎಂ. ವಿ. ರಘು ಅವರು.
ಓದುಗರ ಕಾಮಧೇನು ಮತ್ತು ಕಲ್ಪವೃಕ್ಷವಾಗಿರುವ ಹುಬ್ಬಳ್ಳಿ ಸಪ್ನ ಬುಕ್ ಹೌಸ ಇನ್ನೂ ಹೆಚ್ಚಿನ ರೀತಿಯಲ್ಲಿ ಕನ್ನಡ ನಾಡು, ನುಡಿ ಸೇವೆ ಮಾಡುವರೊಂದಿಗೆ, ಪುಸ್ತಕ ಸಂಸ್ಕೃತಿಯನ್ನು ಬೆಳಸಲಿ.
-ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

ಪ್ರಮುಖ ಸುದ್ದಿ :-   ಕರ್ನಾಟಕದ 7 ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಮಳೆ ಅಬ್ಬರ ; ಉಳಿದ ಜಿಲ್ಲೆಗಳಲ್ಲಿ ಚುರುಕು

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement