ನವದೆಹಲಿ : ಪೆಟ್ರೋಲ್ ದುಬಾರಿಯಾಗಿರುವ ಸಂದರ್ಭದಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ 15 ರೂಪಾಯಿಗೆ ಲೀಟರ್ ಪೆಟ್ರೋಲ್ ಸಿಗುವ ದಿನ ದೂರ ಇಲ್ಲ ಎಂಬ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹ 15 ಕ್ಕೆ ಇಳಿಸುವ ವಿನೂತನ ಪ್ರಸ್ತಾಪ ಮಾಡಿದ್ದಾರೆ.
ರಾಜಸ್ಥಾನದ ಪ್ರತಾಪಗಢದಲ್ಲಿ ನಡೆದ ರ್ಯಾಲಿಯಲ್ಲಿ, ನಿತಿನ್ ಗಡ್ಕರಿ ಅವರು ದೇಶಾದ್ಯಂತ ರೈತರನ್ನು “ಉರ್ಜಾದಾತ” (ಶಕ್ತಿ ಪೂರೈಕೆದಾರರು) ಆಗಲು ಸಬಲೀಕರಣಗೊಳಿಸುವ ತಮ್ಮ ದೃಷ್ಟಿಕೋನವನ್ನು ಅವರು ಹಂಚಿಕೊಂಡರು. ರೈತರು ಕೇವಲ ಅನ್ನದಾತರು ಮಾತ್ರವಲ್ಲದೆ ಇಂಧನದಾತರೂ ಆಗಬೇಕೆಂದು ಕೇಂದ್ರ ಸರ್ಕಾರ ಬಯಸುತ್ತದೆ ಎಂದು ಹೇಳಿದ ಅವರು ಹೀಗಾದರೆ ದೇಶದಲ್ಲಿ ಪೆಟ್ರೋಲ್ ದರ ಲೀಟರಿಗೆ ಕೇವಲ 15 ರೂಪಾಯಿಗೆ ಬರಲಿದೆ ಎಂದು ಹೇಳಿದ್ದಾರೆ.
ಇದಕ್ಕೆ ಅವರು ತಾರ್ಕಿಕತೆಯನ್ನೂ ನೀಡಿದ್ದಾರೆ. ದೇಶದಲ್ಲಿ ವಾಹನಗಳಿಗೆ 60%ರಷ್ಟು ಎಥೆನಾಲ್ ಮತ್ತು 40 ರಷ್ಟು ವಿದ್ಯುತ್ ಬಳಕೆ ಮಾಡಿದರೆ ಪೆಟ್ರೋಲ್ ಪ್ರತಿ ಲೀಟರ್‌ಗೆ ₹ 15 ದರದಲ್ಲಿ ಲಭ್ಯವಿರುತ್ತದೆ ಮತ್ತು ಜನರಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು. ತಮ್ಮ ಭಾಷಣದಲ್ಲಿ ಸಚಿವರು ಎಥೆನಾಲ್ ಮತ್ತು ವಿದ್ಯುಚ್ಛಕ್ತಿಯ ಮಿಶ್ರಣವನ್ನು ಬಳಸಿಕೊಳ್ಳುವ ಅನುಕೂಲಗಳ ಬಗ್ಗೆ ಒತ್ತಿ ಹೇಳಿದರು.
ಆಟೋ ರಿಕ್ಷಾದಿಂದ ಹಿಡಿದು ಕಾರುಗಳವರೆಗಿನ ವಾಹನಗಳು ಎಥೆನಾಲ್‌ನಿಂದ ಚಲಿಸುತ್ತವೆ. ಭಾರತದ ತೈಲ ಆಮದು ಕಡಿಮೆಯಾಗುತ್ತದೆ. ರೈತರು ಸಮೃದ್ಧರಾಗುತ್ತಾರೆ. ಅಂತಹ ಮಿಶ್ರಣವು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಜೊತೆಗೆ ಪೆಟ್ರೋಲ್ ಆಮದುಗಳನ್ನು ಕಡಿಮೆ ಮಾಡುತ್ತದೆ, ಅಂದರೆ ₹ 16 ಲಕ್ಷ ಕೋಟಿಗಳ ಬೃಹತ್ ಆಮದು ವೆಚ್ಚದ ಹಣ ರೈತರ ಮನೆಗಳಿಗೆ ಹೋಗುತ್ತದೆ ಎಂದು ಹೇಳಿದ್ದಾರೆ.
ಗಡ್ಕರಿ ಅವರು ಪ್ರತಾಪಗಢದಲ್ಲಿ ಒಟ್ಟು ₹ 5,600 ಕೋಟಿಗಳ 11 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು.ಒಟ್ಟು 219 ಕಿ.ಮೀ ಉದ್ದದ ₹ 3,775 ಕೋಟಿ ವೆಚ್ಚದ ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಾಯಿತು. ರಾಜಸ್ಥಾನದಲ್ಲಿ, ಕೇಂದ್ರ ರಸ್ತೆಗಳ ನಿಧಿಯಡಿ ₹ 2,250 ಕೋಟಿ ವೆಚ್ಚದಲ್ಲಿ 74 ಯೋಜನೆಗಳಿಗೆ ಅನುಮೋದನೆಯನ್ನು ಈ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ