ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಅಮೃತಹಳ್ಳಿಯಲ್ಲಿ ಹಾಡುಹಗಲೇ ಜೋಡಿ ಕೊಲೆಗಳು ನಡೆದಿದೆ. ಹಾಡುಹಗಲೇ ಖಾಸಗಿ ಕಂಪನಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಇಬ್ಬರನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಮೃತರನ್ನು ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ( Aironics Media Pvt Ltd) ಮ್ಯಾನೇಜಿಂಗ್ ಡೈರೆಕ್ಟರ್ ಫಣೀಂದ್ರ ಸುಬ್ರಮಣ್ಯ ಹಾಗೂ ಸಿಇಒ ವಿನು ಕುಮಾರ ಎಂದು ಗುರುತಿಸಲಾಗಿದೆ.
ಶಂಕಿತ ಆರೋಪಿಯನ್ನು ಫೆಲಿಕ್ಸ್ ಎಂದು ಗುರುತಿಸಲಾಗಿದ್ದು, ಮಂಗಳವಾರ (ಜುಲೈ 11) ಸಂಜೆ 4 ಗಂಟೆ ಸುಮಾರಿಗೆ ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ. ಈತ ತಲ್ವಾರ ಮತ್ತು ಚಾಕು ಬಳಸಿದ್ದ ಎಂದು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಶಂಕಿತ ಆರೋಪಿ ಫೆಲಿಕ್ಸ್ ಏರೋನಿಕ್ಸ್ ಕಂಪನಿಯ ಹಳೆ ಉದ್ಯೋಗಿ ಎಂದು ಹೇಳಲಾಗಿದೆ. ಏರೋನಿಕ್ಸ್ ಕಂಪನಿಯ ಉದ್ಯೋಗ ಬಿಟ್ಟ ಹೋದ ಬಳಿಕ ಆತ ಇಂಥದ್ದೇ ಒಂದು ಕಂಪನಿ ಶುರುಮಾಡಿದ್ದ ಹಾಗೂ ತನ್ನ ಉದ್ಯಮಕ್ಕೆ ಫಣೀಂದ್ರ ಎದುರಾಳಿ ಎಂದೇ ಆತ ಭಾವಿಸಿದ್ದ ಎನ್ನಲಾಗಿದೆ. ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಇನ್ನೂ ಇಬ್ಬರೊಂದಿಗೆ ಕಂಪನಿಗೆ ಎಂಟ್ರಿ ಕೊಟ್ಟ ಈತ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಹಾಗೂ ಇತನ ಜೊತೆ ಮತ್ತಿಬ್ಬರು ಇದ್ದರು ಎಂದು ಶಂಕಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ