ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ತನ್ನ ಪ್ರೇಮಿ ಸಚಿನ್ ಜೊತೆ ಇರಲು ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಹೊರಗಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ತಾನು ಭಾರತೀಯ ಸಂಸ್ಕೃತಿಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇನೆ ಮತ್ತು ಯಾವತ್ತಿಗೂ ಪಾಕಿಸ್ತಾನಕ್ಕೆ ಮರಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. .
2019 ರಲ್ಲಿ PUBG ಎಂಬ ಮೊಬೈಲ್ ಗೇಮ್ ಆಡುವಾಗ ಪಾಕಿಸ್ತಾನಿ ಮಹಿಳೆ ಮತ್ತು ಭಾರತೀಯ ಪುರುಷನ ಪ್ರೇಮ ಕಥೆಯು ಅನೇಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಭಾರತದ ತನ್ನ ಪ್ರೇಮಿಯೊಂದಿಗೆ ಇರಲು, ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದಳು ಮತ್ತು ಮಕ್ಕಳೊಂದಿಗೆ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟಿನಲ್ಲಿ ಸಚಿನ್ ಅವರೊಂದಿಗೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.
ನೇಪಾಳದ ಮೂಲಕ ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಜುಲೈ 4 ರಂದು ಆಕೆಯನ್ನು ಬಂಧಿಸಲಾಗಿತ್ತು. ಆಕೆಗೆ ಸಹಾಯ ಮಾಡಿದ್ದಕ್ಕಾಗಿ ಸಚಿನ್‌ನನ್ನು ಸಹ ಬಂಧಿಸಲಾಯಿತು. ಆದರೆ, ಶುಕ್ರವಾರ ಅವರಿಗೆ ಜಾಮೀನು ಸಿಕ್ಕಿದೆ.
ಇಂಡಿಯಾ ಟುಡೆ ಜೊತೆ ಮಾತನಾಡಿದ ಸೀಮಾ ಹೈದರ್, ತನ್ನ ದೈನಂದಿನ ದಿನಚರಿಯು ಈಗ ತನ್ನ ಕೊರಳಲ್ಲಿ ರಾಧೆ-ರಾಧೆ ಪಟ್ಟಿಯನ್ನು ಧರಿಸುವುದು, ಜನರಿಗೆ ಕೈಮುಗಿದು ನಮಸ್ಕರಿಸುವುದು, ಆಶೀರ್ವಾದಕ್ಕಾಗಿ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ಮತ್ತು ದೇವರನ್ನು ಪ್ರಾರ್ಥಿಸುವುದನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.
ತಾನು ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ ಮತ್ತು ಬೆಳ್ಳುಳ್ಳಿಯನ್ನೂ ಸಹ ಸೇವಿಸದ ಸಚಿನ್ ಕುಟುಂಬದಂತೆ ಸಸ್ಯಾಹಾರಿ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.ಸೀಮಾ ಹೈದರ್ ತನಗೆ ಪಾಕಿಸ್ತಾನಕ್ಕೆ ಹಿಂತಿರುಗುವ ಬಯಕೆ ಇಲ್ಲ, ಏಕೆಂದರೆ ತಾನು ಹಿಂತಿರುಗಿದರೆ ಅಲ್ಲಿ ತಾನು ಕೊಲ್ಲಲ್ಪಡುತ್ತೇನೆ ಎಂದು ಭಾವಿಸಿದ್ದಾಳೆ.
ಆಕೆಯ ಮಕ್ಕಳಿಗೆ ಪಾಕಿಸ್ತಾನಕ್ಕೆ ಮರಳಲು ಅವಕಾಶವಿದ್ದರೂ, ಅವರು ಅವಳೊಂದಿಗೆ ಇರುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತನ್ನ ಮೊದಲ ಪತಿ ಗುಲಾಮ್ 2020 ರಿಂದ ತನ್ನ ಜೀವನದಿಂದ ದೂರವಾಗಿದ್ದಾನೆ ಎಂದು ಸೀಮಾ ಹೇಳಿದ್ದಾಳೆ.
ಆಕೆಯ ಮುಖದ ಮೇಲೆ ಮೆಣಸಿನ ಪುಡಿಯನ್ನು ಹಾಕಿದ ಘಟನೆ ಒಳಗೊಂಡಂತೆ ಗುಲಾಮ್‌ನಿಂದ ತನಗಾದ ಹಿಂಸೆಯ ಬಗ್ಗೆ ವಿವರಿಸಿದ್ದು, ಸಚಿನ್ ಈಗ ತನ್ನ ಗಂಡನಾಗಿದ್ದಾನೆ, ಮತ್ತು ನಾನು ಅವನೊಂದಿಗೆ ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾಳೆ.
ಮಕ್ಕಳು ಕೂಡ ಸಚಿನ್ ಅವರನ್ನು ತಮ್ಮ ತಂದೆಯಂತೆಯೇ ಸ್ವೀಕರಿಸಿದ್ದಾರೆ ಎಂದು ಹೇಳಿದ ಸೀಮಾ, ಅನೇಕರು ತನ್ನನ್ನು ಭೇಟಿಯಾಗಲು ಮತ್ತು ಅವಳ ಹೊಸ ಜೀವನವನ್ನು ಬೆಂಬಲಿಸಲು ಹಣಕಾಸಿನ ನೆರವು ನೀಡಲು ತನ್ನ ಅತ್ತೆಯ ಮನೆಗೆ ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾಳೆ.
ನಿಮ್ಮ ಕಾಮೆಂಟ್ ಬರೆಯಿರಿ