ಈ ದಿನಾಂಕದಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ : ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ? : ಮಾಹಿತಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​

ಬೆಂಗಳೂರು: ರಾಜ್ಯ ಸರ್ಕಾರದ ಮತ್ತೊಂದು ಗ್ಯಾರಂಟಿ ಯೋಜನೆಯಾದ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಯು ಜುಲೈ 19ರಿಂದ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, . 2 ಸಾವಿರ ರೂ.ಗಳನ್ನು ಆಗಸ್ಟ್‌ 18ರಿಂದ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಡೆಡ್ ಲೈನ್ ಇಲ್ಲ ಎಂದು ತಿಳಿಸಿದರು.
ಅಲ್ಲದೆ, ಗೃಹಲಕ್ಷ್ಮೀ ಯೋಜನೆಗೆ ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳು, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರಗಳು, ತಾಲೂಕು ಕಚೇರಿಗಳು, ನಾಡ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿದಾರರು ಆನ್ ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ತೆರಿಗೆದಾರರಲ್ಲದ, ಜಿಎಸ್ ಟಿ ಪಾವತಿಸದವರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಆನ್ ಲೈನ್ ಸೌಲಭ್ಯಗಳು ಇಲ್ಲದ ಕಡೆಗಳಲ್ಲಿ ಸರ್ಕಾರದಿಂದ ಕಳಿಸಲಾಗುವ ʼಪ್ರಜಾಪ್ರತಿನಿಧಿʼಗಳು ಪ್ರತಿ ಮನೆಗಳಿಗೆ ಹೋಗಿ ದಾಖಲೆಗಳನ್ನು ಪರಿಶೀಲಿಸಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸ್ವೀಕರಿಸಲಿದ್ದಾರೆ. ʼಪ್ರಜಾಪ್ರತಿನಿಧಿʼಗಳು ಅರ್ಜಿ ಸ್ವೀಕರಿಸಿದ ಕೆಲ ದಿನಗಳ ನಂತರ ಆ ಮನೆಗಳಿಗೆ ಗೃಹ ಲಕ್ಷ್ಮೀ ಯೋಜನೆಗೆ ಅರ್ಹರಾಗಿರುವ ಬಗ್ಗೆ ದೃಢೀಕರಣ ಪತ್ರವನ್ನು ʼಪ್ರಜಾಪ್ರತಿನಿಧಿʼಗಳ ಮೂಲಕ ಅಥವಾ ಅಂಚೆಯ ಮೂಲಕ ಕಳುಹಿಸಲಾಗುತ್ತದೆ ಎಂದರು.

ಬೇಕಿರುವ ದಾಖಲೆ?
ಈ ಯೋಜನೆಯಡಿ ಸಲ್ಲಿಸಬೇಕಾದ ಏನು ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ತಿಳಿಸಿದ ಅವರು, ಎಲ್ಲಾ ಪಡಿತರ ಕಾರ್ಡುಗಳಲ್ಲಿ ಮನೆ ಯಜಮಾನತಿ ಯಾರು ಎಂದು ನಮೂದಾಗಿರುತ್ತದೋ ಅವರ ಹೆಸರಿಗೇ ಹಣ ನೀಡಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಸಲು ಹೋಗುವವರು ತಮ್ಮೊಂದಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಗಳನ್ನು ಕೊಂಡೊಯ್ಯಬೇಕು. ಒಂದು ವೇಳೆ ಆಧಾರ್ ಕಾರ್ಡ್ ಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ ಎನ್ನುವವರು ಅರ್ಜಿ ಸಲ್ಲಿಕೆಯ ಕೇಂದ್ರಕ್ಕೆ ಪಡಿತರ ಚೀಟಿ, ಆಧಾರ್ ಕಾರ್ಡ್, ತಮ್ಮ ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ತೆಗೆದುಕೊಂಡು ಹೋಗಬೇಕು ಎಂದು ವಿವರಿಸಿದರು.
ಪಡಿತರ ಚೀಟಿಯಲ್ಲಿರುವ ಮನೆ ಒಡತಿಯ ಹೆಸರಿಗೆ ಲಿಂಕ್ ಆಗಿರುವ ಮೊಬೈಲ್ ಗೆ ಸದ್ಯದಲ್ಲೇ ಸರ್ಕಾರದಿಂದ ಸಂದೇಶ ಬರಲಿದೆ. ಮನೆಯ ಯಜಮಾನಿಯು ವಾಸಿಸುವ ಸ್ಥಳದಿಂದ ಹತ್ತಿರದಲ್ಲಿರುವ ಸರ್ಕಾರಿ ಸೇವಾ ಕೇಂದ್ರಗಳಿಗೆ ಯಾವ ದಿನ, ಯಾವ ಸಮಯಕ್ಕೆ ಹೋಗಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಾವಣೆ ಮಾಡಿಸಿಕೊಳ್ಳಬೇಕು ಎಂಬ ಸಂದೇಶ ಬರಲಿದೆ. ಆ ಸಂದೇಶವನ್ನು ಆಧರಿಸಿ ಮನೆಯೊಡತಿಯು ಸೂಕ್ತ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಅರ್ಜಿ ಸಲ್ಲಿಕೆ ವೇಳೆ, ಅರ್ಜಿದಾರ ಮಹಿಳೆಯು ತನ್ನ ಹೆಸರಿನಲ್ಲಿರುವ ಯಾವುದೇ ಪರ್ಯಾಯ ಬ್ಯಾಂಕ್ ಖಾತೆಗೂ ಹಣ ಹಾಕುವಂತೆ ಮಾಡಿಕೊಳ್ಳಬಹುದು. ಅದಕ್ಕೆ ಆಕೆಯು ಅದಕ್ಕೆ ಪೂರಕವಾದ ದಾಖಲೆಗಳನ್ನು ಅರ್ಜಿ ಸಲ್ಲಿಕೆ ವೇಳೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಹೆಲ್ಪ್ ಲೈನ್ ಸಂಖ್ಯೆಗಳು
ಯೋಜನೆಯನ್ನು ಎಲ್ಲಿ ನೋಂದಾಯಿಸಿಕೊಳ್ಳಬೇಕು, ಎಲ್ಲಿ ಹೋಗಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು, ಯೋಜನೆಯ ಅರ್ಜಿ ಸಲ್ಲಿಕೆ ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಸರ್ಕಾರ ಟೋಲ್ ಫ್ರೀ ಸಂಖ್ಯೆ ಬಿಡುಗಡೆ ಮಾಡಿದೆ ಎಂದು ತಿಳಿಸಿದರು. 8147500500 ಹಾಗೂ 1902 ಸಂಖ್ಯೆಯು ಅದಾಗಿದ್ದು ಆ ಸಂಖ್ಯೆಗೆ ಕರೆ ಮಾಡಿ, ಯೋಜನೆಯ ಫಲಾನುಭವಿಗಳು ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಯೋಜನೆಯಡಿ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ. ಆದ್ದರಿಂದ ಒಂದು ವೇಳೆ ನಿಗದಿತ ದಿನಾಂಕ/ಸಮಯಕ್ಕೆ ನೊಂದಾಯಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದೆ ಯಾವುದೇ ದಿನಾಂಕ/ಸಮಯದಲ್ಲಿ ನೊಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಯೋಜನೆಗೆ ಸೇರ್ಪಡೆ ಮಾಡಿಕೊಳ್ಳುವಾಗ ಯಾರಾದರೂ ಲಂಚ ಕೇಳಿದರೆ ಅಂಥ ಸಂದರ್ಭಗಳಲ್ಲಿಯೂ ಜನರು ಈ ಮೇಲಿನ ಸಂಖ್ಯೆಗೆ ಕರೆ ಮಾಡಿ ತಮ್ಮ ದೂರು ದಾಖಲಿಸಬಹುದು ಎಂದು ಸಚಿವರು ವಿವರಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement