ಈ ವಾರ ಬಿಜೆಪಿ ನೇತೃತ್ವದ ಎನ್‌ಡಿ ಮೈತ್ರಿಕೂಟದ 30 ಪಕ್ಷಗಳು Vs 24 ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ

ನವದೆಹಲಿ : ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳು ಅಂಕಿ-ಅಂಶಗಳೊಂದಿಗೆ ಹೈ ವೋಲ್ಟೇಜ್ ರಾಜಕೀಯ ಹಣಾಹಣಿಗೆ ಸಿದ್ಧತೆ ನಡೆಸಿವೆ.
ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮಂಗಳವಾರ ನವದೆಹಲಿಯಲ್ಲಿ ಬೃಹತ್‌ ಸಭೆ ಮಾಡುವ ಬಗ್ಗೆ ಘೋಷಿಸಿದ್ದು, ಇದಕ್ಕೆ ಸುಮಾರು 30 ಪಕ್ಷಗಳು ಮೈತ್ರಿಗೆ ಬೆಂಬಲವನ್ನು ಪುನರುಚ್ಚರಿಸುವ ನಿರೀಕ್ಷೆಯಿದೆ. ಇದೇವೇಳೆ ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಬಿಜೆಪಿಯನ್ನು ಎದುರಿಸಲು 24 ವಿರೋಧ ಪಕ್ಷಗಳು ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಸಭೆ ಸೇರಿ ಯೋಜನೆ ರೂಪಿಸಲಿವೆ. ಜುಲೈ 20 ರಂದು ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಈ ಪಕ್ಷಗಳು ಸಿದ್ಧತೆ ನಡೆಸಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸಭೆ ನಡೆಯಲಿದೆ. ಮಂಗಳವಾರ ಸಂಜೆ ದೆಹಲಿಯ ಅಶೋಕ್ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಗೆ ತಮ್ಮ ಮಿತ್ರ ಪಕ್ಷಗಳನ್ನು ಹೊರತುಪಡಿಸಿ, ಬಿಜೆಪಿ ಹಲವಾರು ಹೊಸ ಮಿತ್ರರನ್ನು ಮತ್ತು ಕೆಲವು ಮಾಜಿ ಮಿತ್ರರನ್ನು ಕೂಡ ಆಹ್ವಾನಿಸಿದೆ. ಎನ್‌ಡಿಎಯಲ್ಲಿರುವ ಎಲ್ಲಾ ಪಕ್ಷಗಳು ಸಂಸತ್ತಿನಲ್ಲಿ ಅಸ್ತಿತ್ವವನ್ನು ಹೊಂದಿಲ್ಲ.
ಬಿಹಾರದ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಚಿರಾಗ್ ಪಾಸ್ವಾನ್, ಹಿಂದೂಸ್ತಾನಿ ಅವಾಮ್ ಮೋರ್ಚಾದ ಜಿತನ್ ರಾಮ್ ಮಾಂಝಿ, ರಾಷ್ಟ್ರೀಯ ಲೋಕ ಸಮತಾ ಪಕ್ಷದ ಉಪೇಂದ್ರ ಸಿಂಗ್ ಕುಶ್ವಾಹಾ ಮತ್ತು ವಿಕಾಸಶೀಲ ಇನ್ಸಾನ್ ಪಕ್ಷದ ಮುಖೇಶ್ ಸಹಾನಿ ಅವರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. ಮತ್ತು ಅವರ ಪಕ್ಷಗಳನ್ನು ಎನ್‌ಡಿಎಗೆ ಸೇರಿಸಿಕೊಳ್ಳಲಾಗುತ್ತದೆ.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

ಉತ್ತರ ಪ್ರದೇಶದಲ್ಲಿ ಅಖಿಲೇಶ ಯಾದವ್‌ ಅವರ ಸಮಾಜವಾದಿ ಪಕ್ಷದ ಮಿತ್ರಪಕ್ಷವಾಗಿದ್ದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಓಂ ಪ್ರಕಾಶ್ ರಾಜಭರ್ ಅವರು ಭಾನುವಾರ ಬೆಳಿಗ್ಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಎನ್‌ಡಿಎಗೆ ಮರು ಸೇರ್ಪಡೆಗೊಳ್ಳುವುದಾಗಿ ಘೋಷಿಸಿದರು. ಈ ಮಧ್ಯೆ ಉತ್ತರ ಪ್ರದೇಶದ ಮೌ ಜಿಲ್ಲೆಯ ಘೋಸಿಯ ಸಮಾಜವಾದಿ ಪಕ್ಷದ ಶಾಸಕ ದಾರಾ ಸಿಂಗ್ ಚೌಹಾಣ್ ಅವರು ನಿನ್ನೆ ಉತ್ತರ ಪ್ರದೇಶ ವಿಧಾನಸಭೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಆಂದ್ರಪ್ರದೇಶದಲ್ಲಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮತ್ತು ಬಾದಲ್ ಕುಟುಂಬದ ನೇತೃತ್ವದ ಶಿರೋಮಣಿ ಅಕಾಲಿದಳವು ಹಲವು ಊಹಾಪೋಹಗಳ ನಂತರವೂ ಎನ್‌ಡಿಎ ಭಾಗವಾಗುವುದಿಲ್ಲ ಹಾಗೂ ಈ ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ಪಂಜಾಬ್‌ನಲ್ಲಿ ಏಕಾಂಗಿಯಾಗಿ ಚುನಾವಣೆಗೆ ಹೋಗಲಿದೆ ಹಾಗೂ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಯೋಜಿಸಿದೆ ಎಂದು ಹೇಳಲಾಗುತ್ತಿದೆ.

ಎನ್‌ಡಿಎ ಪ್ರಸ್ತುತ ಬಿಜೆಪಿ, ಎಐಎಡಿಎಂಕೆ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ), ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ), ಎಸ್‌ಕೆಎಂ (ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ), ಜೆಜೆಪಿ (ಜನನಾಯಕ್ ಜನತಾ ಪಾರ್ಟಿ), ಐಎಂಕೆಎಂಕೆ ( ಭಾರತೀಯ ಮಕ್ಕಳ್ ಕಲ್ವಿ ಮುನ್ನೇತ್ರ ಕಜ್ಗಮ್), AJSU (ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್), ಆರ್‌ಪಿಐ (ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ), ಎಂಎನ್‌ ಎಫ್‌ (ಮಿಜೋ ನ್ಯಾಷನಲ್ ಫ್ರಂಟ್), ಟಿಎಂಸಿ (ತಮಿಳು ಮನಿಲಾ ಕಾಂಗ್ರೆಸ್), ಐಪಿಎಫ್‌ ಟಿ (ತ್ರಿಪುರ), ಬಿಪಿಪಿ (ಬೋಡೋ ಪೀಪಲ್ಸ್ ಪಾರ್ಟಿ), ಪಿಎಂಕೆ (ಪಾಟಲಿ ಮಕ್ಕಳ್ ಕಚ್ಚಿ), ಎಂಜಿಪಿ (ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ), ಅಪ್ನಾ ದಳ, ಎಜಿಪಿ (ಅಸ್ಸಾಂ ಗಣ ಪರಿಷತ್), ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ, ನಿಶಾದ್ ಪಾರ್ಟಿ, ಯುಪಿಪಿಎಲ್ (ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್), ಎಐಆರ್‌ಎನ್‌ಸಿ (ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ಪುದುಚೇರಿ), ಶಿರೋಮಣಿ ಅಕಾಲಿದಳ ಸಂಯುಕ್ತ (ಧಿಂಧ್ಸಾ), ಮತ್ತು ಜನಸೇನಾ (ಪವನ್ ಕಲ್ಯಾಣ) ಹೀಗೆ 24 ಪಕ್ಷಗಳನ್ನು ಹೊಂದಿದೆ.
ಅಲ್ಲದೆ, ಎನ್‌ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಅಜಿತ್ ಪವಾರ್ ಬಣ), ಲೋಕ ಜನ ಶಕ್ತಿ ಪಾರ್ಟಿ (ರಾಮ್ ವಿಲಾಸ್), ಎಚ್‌ಎಎಂ (ಹಿಂದೂಸ್ತಾನಿ ಅವಾಮ್ ಮೋರ್ಚಾ), ಆರ್‌ಎಲ್‌ಎಸ್‌ಪಿ (ರಾಷ್ಟ್ರೀಯ ಲೋಕ ಸಮತಾ ಪಾರ್ಟಿ), ವಿಐಪಿ (ವಿಕಾಸಶೀಲ ಇನ್ಸಾನ್ ಪಾರ್ಟಿ), ಮತ್ತು ಎಸ್‌ಬಿಎಸ್‌ಪಿ (ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ) ಓಂ ಪ್ರಕಾಶ್ ರಾಜಭರ್) ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ.
ದೆಹಲಿಯ ಅಧಿಕಾರಶಾಹಿಯ ಮೇಲೆ ಹಿಡಿತ ಸಾಧಿಸಿದ ವಿವಾದಾಸ್ಪದ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಆಮ್ ಆದ್ಮಿ ಪಕ್ಷದ ಅಭಿಯಾನಕ್ಕೆ ಕಾಂಗ್ರೆಸ್‌ ಬೆಂಬಲ ಘೋಷಣೆ ಮಾಡಿದ ನಂತರ ಆಮ್‌ ಆದ್ಮಿ ಪಾರ್ಟಿ ಬೆಂಗಳೂರಿನಲ್ಲಿ ಸೋಮವಾರದಿಂದ ನಡೆಯುವ ಎರಡು ದಿನಗಳ 24 ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement