‘ಗೃಹ ಲಕ್ಷ್ಮಿ’ ಯೋಜನೆ: ಜುಲೈ 19ರಿಂದ ನೋಂದಣಿ ಆರಂಭ; ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ

ಬೆಂಗಳೂರು : ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮಹಿಳೆಯರಿಗಾಗಿ ರೂಪಿಸಿರುವ ಗೃಹ ಲಕ್ಷ್ಮಿ ಯೋಜನೆಗೆ ಜುಲೈ 19ರಿಂದ ನೋಂದಣಿ ಆರಂಭವಾಗಲಿದೆ. ಯೋಜನೆಗೆ ಜುಲೈ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಕುಟುಂಬದ ಯಜಮಾನಿಗೆ ಮಾಸಿಕವಾಗಿ ₹2,000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆಯನ್ನೂ ಬಿಡುಗಡೆ ಮಾಡಿದೆ. ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬೇಡಿ ಎಂದು ಸರ್ಕಾರ ಹೇಳಿದೆ.
ಮಾರ್ಗಸೂಚಿಗಳೇನು..?
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆ ಲಾಭ ಪಡೆಯಲು ಅರ್ಹತೆ ಪಡೆಯುತ್ತಾರೆ. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಅರ್ಜಿಯಲ್ಲಿನ ಅಂಶಗಳ ಬಗ್ಗೆ ಆ ಮೇಲೆ ಪರಿಶೀಲನೆ ಮಾಡಲಾಗುತ್ತದೆ. ಆಗ ಯಾವುದೇ ಸುಳ್ಳು ಮಾಹಿತಿ ನೀಡಿ ಸೌಲಭ್ಯ ಪಡೆದದ್ದು ಕಂಡುಬಂದರೆ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುತ್ತದೆ ಮತ್ತು ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರು ಬ್ಯಾಂಕ್ ಖಾತೆ ಮತ್ತು ಆಧಾರ ಕಾರ್ಡ್ ಗಳನ್ನು ಜೋಡಣೆ ಮಾಡಬೇಕು. ಒದು ವೇಳೆ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಹಾಗೂ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಮಾಡುತ್ತಿದ್ದರೆ ಅಂತಹವರು ಈ ಯೋಜನೆಯಡಿ ಲಾಭ ಪಡೆಯಲು ಅರ್ಹರಾಗುವುದಿಲ್ಲ ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಕೆ ಸಮಯದಲ್ಲಿ ಮನೆಯ ಯುಜಮಾನಿಯು ಬ್ಯಾಂಕ್‌ ಖಾತೆ ಜೊತೆ ಲಿಂಕ್‌ ಮಾಡಿರುವ ರೇಷನ್‌ ಕಾರ್ಡ್‌ ಸಂಖ್ಯೆ ಮತ್ತು ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ನೀಡಬೇಕು. ಬೇರೆ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗುವುದನ್ನು ಮನೆಯ ಯುಜಮಾನಿ ಬಯಸಿದರೆ ಪಾಸ್‌ಬುಕ್‌ ಜತೆಗೆ ಬ್ಯಾಂಕ್‌ ಖಾತೆಯ ವಿವರವನ್ನು ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ.
ಮಾಹಿತಿಗೆ ಸಹಾಯ ವಾಣಿ
ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ನಿಗದಿ ಪಡಿಸಿದ ಗ್ರಾಮ ಒನ್, ಕರ್ನಾಟಕ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹತ್ತಿರದಲ್ಲಿರುವ ಈ ಯಾವುದಾದರೂ ಒಂದು ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದು. ರೇಷನ್‌ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ, ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರವನ್ನು ತಿಳಿಸಲಾಗುತ್ತದೆ. ಆನಂತರವೇ  ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

ಪಡಿತರ ಚೀಟಿಯ ಸಂಖ್ಯೆಯನ್ನು 8147500500 ಈ ಸಂಖ್ಯೆಗೂ ಎಸ್‌ಎಂಎಸ್‌ ಮಾಡಬಹುದು. ಕೂಡಲೇ ಮುಖ್ಯಸ್ಥೆಗೆ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಬರುತ್ತದೆ. ಅದನ್ನು ಅನುಸರಿಸಿ ಮುಂದಿನ ಪ್ರಕ್ರಿಯೆ ನಡೆಯಲಿದೆ. ಯೋಜನೆಯಲ್ಲಿ ಯಾವ ಕೇಂದ್ರ, ದಿನಾಂಕ, ಸಮಯ ಎಲ್ಲ ಮಾಹಿತಿಯೂ ಫಲಾನುಭವಿ ಮಹಿಳೆಗೆ ಹೋಗಲಿದೆ. ಆದರೂ ಗೊಂದಲವಿದ್ದರೆ ಇಲಾಖೆ 1902 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಇದಲ್ಲದೆ, ಸರ್ಕಾರದಿಂದ ಗುರುತಿಸಲ್ಪಟ್ಟ ಪ್ರಜಾಪ್ರತಿನಿಧಿ ನಿಮ್ಮ ಮನೆಗೆ ಭೇಟಿ ನೀಡಬಹುದು. ಅವರಿಂದಲೂ ನೋಂದಣಿ ಮಾಡಿಸಿಕೊಳ್ಳಬಹುದು.
ನಿಗದಿತ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಾಗ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ಮನೆಗೆ ತಲುಪಲಿದೆ. ಅಲ್ಲದೆ, ಮೊಬೈಲ್​ ಸಂಖ್ಯೆಗೂ ಸಂದೇಶ ಬರಲಿದೆ.
ಫಲಾನುಭವಿಗಳಿಗೆ ಆಗಸ್ಟ್‌ನಲ್ಲಿ ಹಣ ಜಮೆ ಆಗಲಿದೆ ಎಂದು ಸರ್ಕಾರ ತಿಳಿಸಿದೆ. 2,000 ರೂ ನಗದು ಹಣವನ್ನು ಫಲಾನುಭವಿಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಆಗಸ್ಟ್ 16 ರಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿಸಲಾಗುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement