‘ಶಿವಲಿಂಗ’ ರಚನೆ ಹೊರತುಪಡಿಸಿ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದ ವಾರಾಣಸಿ ನ್ಯಾಯಾಲಯ

ವಾರಾಣಸಿ : ವಾರಾಣಸಿ ನ್ಯಾಯಾಲಯವು ಶುಕ್ರವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯಿಂದ ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಆದೇಶಿಸಿದೆ ಎಂದು ಸರ್ಕಾರಿ ವಕೀಲ ರಾಜೇಶ ಮಿಶ್ರಾ ತಿಳಿಸಿದ್ದಾರೆ.
ಹಿಂದೂ ದಾವೆದಾರರು ‘ಶಿವಲಿಂಗ’ ಎಂದು ಹೇಳಿಕೊಳ್ಳುವ ರಚನೆಯು ಈ ಸಮೀಕ್ಷೆಯ ಭಾಗವಾಗಿರುವುದಿಲ್ಲ. ಹಿಂದೂ ದೇವಾಲಯದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆಯನ್ನು ಕೋರಿ ಹಿಂದೂ ಭಕ್ತರ ಗುಂಪಿನ ಅರ್ಜಿಯನ್ನು ನ್ಯಾಯಾಧೀಶ ಎ.ಕೆ. ವಿಶ್ವೇಶ ಎತ್ತಿಹಿಡಿದಿದ್ದಾರೆ. ಜುಲೈ 14 ರಂದು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಎಎಸ್‌ಐನಿಂದ ವೈಜ್ಞಾನಿಕ ಸಮೀಕ್ಷೆಯನ್ನು ಬೆಳಿಗ್ಗೆ 8-12 ಗಂಟೆಯ ನಡುವೆ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಸರ್ವೆ ವೇಳೆ ನಮಾಜ್‌ಗೆ ಯಾವುದೇ ನಿರ್ಬಂಧಗಳಿಲ್ಲ ಮತ್ತು ಜ್ಞಾನವಾಪಿ ಮಸೀದಿಗೆ ಯಾವುದೇ ಹಾನಿ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಿಂದೂ ಗುಂಪು ಸಲ್ಲಿಸಿದ ಅರ್ಜಿಯು ಇಡೀ ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿತ್ತು. ಎಎಸ್‌ಐ ಸಮೀಕ್ಷೆಯಿಂದ ಸಂಕೀರ್ಣಕ್ಕೆ ಹಾನಿಯಾಗಬಹುದು ಎಂದು ಮುಸ್ಲಿಂ ಪಕ್ಷದವರು ಈ ಮನವಿಯನ್ನು ವಿರೋಧಿಸಿದ್ದರು.
ಕಳೆದ ವರ್ಷ ವೀಡಿಯೋಗ್ರಾಫಿಕ್ ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿದೆ ಎಂದು ಹೇಳಲಾದ “ಶಿವಲಿಂಗ”ದ ಕಾರ್ಬನ್ ಡೇಟಿಂಗ್ ಸೇರಿದಂತೆ “ವೈಜ್ಞಾನಿಕ ಸಮೀಕ್ಷೆ” ಯನ್ನು ಸುಪ್ರೀಂ ಕೋರ್ಟ್ ಮೇ 19 ರಂದು ಮುಂದೂಡಿತ್ತು.

ಈ ವರ್ಷದ ಆರಂಭದಲ್ಲಿ, ಮಸೀದಿ ಕಮಿಟಿಯು ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಪ್ರಮುಖ ಪ್ರಕರಣವೊಂದರಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿತು, ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿರುವ ಸಿವಿಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತು.
ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪ್ರಾರ್ಥನೆ ಮಾಡುವ ಹಕ್ಕನ್ನು ಕೋರಿ ಹಿಂದೂ ಮಹಿಳಾ ಆರಾಧಕರ ಗುಂಪು ಸಲ್ಲಿಸಿದ ಮೊಕದ್ದಮೆ ಮಾನ್ಯವಾಗಿದೆ, ನ್ಯಾಯಾಲಯವು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement