ನಾಗ್ಪುರ: ಆನ್‌ಲೈನ್ ಜೂಜಾಟದಲ್ಲಿ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಉದ್ಯಮಿಯೊಬ್ಬರು 58 ಕೋಟಿ ರೂಪಾಯಿ ಕಳೆದುಕೊಂಡ ಆನ್‌ಲೈನ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯಮಿಯ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಶಂಕಿತ ಬುಕ್ಕಿಯ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿ ಪರಾರಿಯಾಗಿದ್ದು, ದುಬೈಗೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಶನಿವಾರ ನಡೆದ ದಾಳಿಯ ವೇಳೆ ಆರೋಪಿ ಅನಂತ ಅಲಿಯಾಸ್ ಸೋಂತು ನವರತನ್ ಜೈನ್ ಎಂದು ಗುರುತಿಸಲಾದ ಆರೋಪಿಯ ನಿವಾಸದಿಂದ 14 ಕೋಟಿ ರೂಪಾಯಿ ನಗದು ಹಾಗೂ ನಾಲ್ಕು ಕೆಜಿ ಚಿನ್ನದ ಬಿಸ್ಕತ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ದಾಳಿಗೆ ಮುನ್ನ ಅನಂತ ಪರಾರಿಯಾಗಲು ಯಶಸ್ವಿಯಾಗಿದ್ದಾನೆ. ಆರೋಪಿ ದುಬೈಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಮೋಸ ಹೋಗಿದ್ದು ಹೇಗೆ..?
“ಪ್ರಾಥಮಿಕವಾಗಿ, ಆರೋಪಿ ಜೈನ್, ಹೆಚ್ಚಿನ ಲಾಭ ಗಳಿಸಲು ಲಾಭದಾಯಕ ಮಾರ್ಗವಾಗಿ ಆನ್‌ಲೈನ್ ಜೂಜಾಟವನ್ನು ಅನ್ವೇಷಿಸಲು ಉದ್ಯಮಿಗೆ ಮನವರಿಕೆ ಮಾಡಿದ್ದ. ಆರಂಭದಲ್ಲಿ ಹಿಂದೇಟು ಹಾಕಿದ್ದ ಉದ್ಯಮಿ ಅಂತಿಮವಾಗಿ ಜೈನ್ ಮನವೊಲಿಕೆಗೆ ಮಣಿದು ಹವಾಲಾ ವ್ಯಾಪಾರಿ ಮೂಲಕ ₹ 8 ಲಕ್ಷ ವರ್ಗಾವಣೆ ಮಾಡಿದ್ದಾರೆ’ ಎಂದು ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ ಕುಮಾರ ಹೇಳಿದ್ದಾರೆ.
ಆರೋಪಿಗಳು ಉದ್ಯಮಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿದ್ದರು ಮತ್ತು ಆನ್‌ಲೈನ್ ಜೂಜಿನ ಖಾತೆಯನ್ನು ತೆರೆಯಲು ವಾಚ್‌ಆಪ್‌ಗೆ ಲಿಂಕ್ ಕಳುಹಿಸಿದ್ದರು ಎಂದು ಅಮಿತೇಶ ಕುಮಾರ ತಿಳಿಸಿದ್ದಾರೆ. ಉದ್ಯಮಿ ಖಾತೆಯಲ್ಲಿ 8 ಲಕ್ಷ ರೂಪಾಯಿ ಜಮಾ ಆಗಿರುವುದನ್ನು ಕಂಡು ಜೂಜಾಟ ಆರಂಭಿಸಿದ್ದಾರೆ. ಆರಂಭಿಕ ಯಶಸ್ಸಿನ ನಂತರ, ಉದ್ಯಮಿಯ ಅದೃಷ್ಟವು ಕೈಕೊಟ್ಟಿತು. ಉದ್ಯಮಿ ₹ 5 ಕೋಟಿ ಗೆಲ್ಲುವ ಸಂದರ್ಭದಲ್ಲಿ ₹ 58 ಕೋಟಿ ಕಳೆದುಕೊಂಡರು ಎಂದು ಪೊಲೀಸ್ ಕಮಿಷನರ್ ಹೇಳಿದರು.
ಉದ್ಯಮಿ ಸೋತಿದ್ದರಿಂದ ಅನುಮಾನಗೊಂಡು ಹಣ ವಾಪಸ್ ಕೇಳಿದರೆ ಜೈನ್ ಕೊಡಲು ನಿರಾಕರಿಸಿದ್ದಾನೆ.
ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರು ಗೊಂಡಿಯಾದಲ್ಲಿರುವ ಜೈನ್ ನಿವಾಸದ ಮೇಲೆ ದಾಳಿ ನಡೆಸಿದರು. ಕಾರ್ಯಾಚರಣೆಯ ಪರಿಣಾಮವಾಗಿ ₹ 14 ಕೋಟಿ ನಗದು ಮತ್ತು ನಾಲ್ಕು ಕೆಜಿ ಚಿನ್ನದ ಬಿಸ್ಕತ್‌ಗಳು ಸೇರಿದಂತೆ ಗಣನೀಯ ಪ್ರಮಾಣದ ಸಾಕ್ಷ್ಯಗಳು ಸಿಕ್ಕಿವೆ. ವಶಕ್ಕೆ ಪಡೆದುಕೊಂಡ ನಗದನ್ನು ಎಣಿಕೆ ಮಾಡಲಾಗುತ್ತಿದ್ದು, ಅಂತಿಮವಾಗಿ ಎಷ್ಟು ಸಿಕ್ಕಿವೆ ಎಂಬ ಮಾಹಿತಿ ಸಿಗಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ