ಜುಲೈ 26ರ ವರೆಗೆ ಜ್ಞಾನವಾಪಿ ಮಸೀದಿಯ ಎಎಸ್‌ಐ ಸರ್ವೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಜುಲೈ 26ರವರೆಗೆ ಯಾವುದೇ ಸರ್ವೆ ನಡೆಸದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ ಹಾಗೂ ಪರಿಹಾರಕ್ಕಾಗಿ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗುವಂತೆ ಮುಸ್ಲಿಂ ಅರ್ಜಿದಾರರಿಗೆ ಸೂಚಿಸಿದೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯದ ಎಎಸ್‌ಐ ಆದೇಶವನ್ನು ಪ್ರಶ್ನಿಸಲು ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಗೆ ನ್ಯಾಯಾಲಯವು ಸ್ವಲ್ಪ ಕಾಲಾವಕಾಶ ನೀಡಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಹೇಳಿದೆ.
ಮಸೀದಿ ನಿರ್ವಹಣಾ ಸಮಿತಿಯ ಅರ್ಜಿದಾರರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯದ ನಿರ್ದೇಶನ ಬಂದಿದ್ದು, ಮಸೀದಿಯ ಎಎಸ್‌ಐ ಸರ್ವೆ ನಡೆಸಲು ಜಿಲ್ಲಾ ನ್ಯಾಯಾಲಯದ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ, ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲರಾದ ಹುಜೆಫಾ ಅಹ್ಮದಿ, ಕಟ್ಟಡದ ಆವರಣದಲ್ಲಿ ಎಎಸ್‌ಐ ಸಮೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಜಿಲ್ಲಾ ನ್ಯಾಯಾಲಯದ ಎಎಸ್‌ಐ ಸಮೀಕ್ಷೆ ಆದೇಶದ ವಿರುದ್ಧ ಅಲಹಾಬಾದ್ ಹೈಕೋರ್ಟ್‌ಗೆ ತೆರಳಲು ಮುಸ್ಲಿಂ ಅರ್ಜಿದಾರರಿಗೆ ಕಾಲಾವಕಾಶ ನೀಡಬಹುದು ಎಂದು ಪೀಠ ಹೇಳಿತು.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಎಎಸ್‌ಐ ಸಮೀಕ್ಷೆ ನಡೆಸುವಂತೆ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮುಸ್ಲಿಂ ಕಡೆಯವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement