ಅನುದಾನ ಬಿಡುಗಡೆಗೂ ಹಣಕ್ಕೆ ಬೇಡಿಕೆ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್‌ ಶಾಸಕ ಬರೆದ ಪತ್ರ ವೈರಲ್‌ | ಇದು ಫೇಕ್‌ ಲೆಟರ್‌, ನನ್ನದಲ್ಲ-ಶಾಸಕ ಬಿ.ಆರ್‌.ಪಾಟೀಲ ಸ್ಪಷ್ಟನೆ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ ಎರಡು ತಿಂಗಳಷ್ಟೇ ಆಗಿದೆ. ಈಗಲೇ ಕಾಂಗ್ರೆಸ್‌ನ ಹಿರಿಯ ಶಾಸಕರು ತಮ್ಮದೇ ಪಕ್ಷದ ಸರ್ಕಾರದ ಸಚಿವರ ನಡೆ ಹಾಗೂ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂಬ ವಿಷಯ ಈಗ ರಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈ ಮಧ್ಯೆ ಕಾಂಗ್ರೆಸ್‌ ಶಾಸಕರೊಬ್ಬರು ಮುಖ್ಯಮಂತ್ರಿಗೆ ಬರೆದಿದ್ದಾರೆ ಎಂದು ಹೇಳಲಾದ ಪತ್ರವೊಂದು ವೈರಲ್‌ ಆಗಿದೆ.ಆಳಂದ ಕ್ಷೇತ್ರದ ಶಾಸಕ ಬಿ. ಆರ್. ಪಾಟೀಲ ಅವರು ಈ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಜಿಲ್ಲಾ ಉಸ್ತವಾರಿ ಸಚಿವರ ಅಸಹಕಾರ ಹಾಗೂ ಇಲಾಖೆಗೆ ಸಂಬಂಧಿಸಿದ ಅನುದಾನದ ಬೇಡಿಕೆ ಇತ್ಯಾದಿ ಸಂಗತಿಗಳ ಬಗ್ಗೆ ಅವರು ಉಲ್ಲೇಖ ಮಾಡಿದ್ದಾರೆ. ಜನರ ವಿಶ್ವಾಸ, ಭರವಸೆ ಹಾಗೂ ಅವರ ಪ್ರೀತಿಯಿಂದ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೆ, ನಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಪತ್ರಕ್ಕೆ 20ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿದ್ದಾರೆ. ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಸ್ಥಳೀಯ ಶಾಸಕರು ನಾವಾಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರ ವಿಷಯ. ಇದಲ್ಲದೆ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ, ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ನೀಡುತ್ತಿಲ್ಲ. ಇದರಿಂದಾಗಿ ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡಿ ಕೊಡುತ್ತಿಲ್ಲ, ನಮ್ಮ ಮಾತಿಗೆ ಬೆಲೆಯನ್ನೂ ನೀಡುತ್ತಿಲ್ಲ. ಆದ್ದರಿಂದ ತಾವು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಕೋರಿಕೆ. ನಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ತಾವು ನಡೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖವಿದೆ.
ಇದೇ ಜುಲೈ 27ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಿಎಲ್‌ಪಿ ಸಭೆ ನಡೆಯಲಿದ್ದು, ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಸಭೆಯಲ್ಲಿ ಲೋಕಸಭೆ ಚುನಾವಣೆಗಳ ಬಗ್ಗೆ ಚರ್ಚೆಗಳ ಜೊತೆಗೆ ಈ ಎಲ್ಲ ಸಂಗತಿಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಜೋಗಿ, ಕಬ್ಬಿನಾಲೆ, ಶಿವಾನದಂ ಹೆಗಡೆಗೆ ಕೆರೆಮನೆ ʼಮಹಾಬಲ ಪ್ರಶಸ್ತಿʼ ಪ್ರಕಟ

ಇದು ಫೇಕ್‌ ಲೆಟರ್‌, ನನ್ನದಲ್ಲ ಎಂದು ಶಾಸಕ ಬಿ.ಆರ್‌.ಪಾಟೀಲ ಸ್ಪಷ್ಟನೆ..
ಈ ಪತ್ರ ವೈರಲ್‌ ಆಗುತ್ತಿದ್ದಂತೆ ಈ ಪತ್ರ ತಮ್ಮದಲ್ಲ, ಅದು ನಕಲಿ ಎಂದು ಬಿ.ಆರ್.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಶಾಸಕರ ಕುಂದುಕೊರತೆಗಳನ್ನು ಆಲಿಸಲು ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ತಾನು ಬರೆದ ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ಫೇಕ್ (ನಕಲಿ) ಲೆಟರ್ ಹರಿದು ಬಿಟ್ಟಿದ್ದಾರೆ ಎಂದು ಆಳಂದ ಶಾಸಕ ಬಿ.ಆರ್‌.ಪಾಟೀಲ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೆಲ ಆರೋಪಗಳನ್ನು ಮಾಡುತ್ತಿರುವಂತೆ ಸುಳ್ಳುಗಳನ್ನು ಬರೆದು ಅದನ್ನು ಹರಿಬಿಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪತ್ರಕ್ಕೂ ತಾವು ಬರೆದ ಪತ್ರಕ್ಕೂ ಸಂಬಂಧವಿಲ್ಲ. ನನ್ನ ಹೆಸರಿನ ನಕಲಿ ಪತ್ರದಲ್ಲಿ ನನ್ನ ಸಹಿಯನ್ನು ಫೋಟೋ ಶಾಪ್ ಮೂಲಕ ಅಂಟಿಸಲಾಗಿದೆ. ನನ್ನ ಹಳೆಯ ಮನೆಯ ವಿಳಾಸವಿದೆ. ಪತ್ರವನ್ನು ಟೈಪ್ ಮಾಡಿ, ಸಹಿಗೆ ಜೆರಾಕ್ಸ್ ನಿಂದ ಸ್ಕ್ಯಾನ್ ಮಾಡಿ ಬಳಸಲಾಗಿದೆ. ಈ ಪತ್ರ ನನ್ನದಲ್ಲ. ನನ್ನ ಎಲ್ಲಾ ಅಧಿಕೃತ ಪತ್ರಗಳಲ್ಲಿ ಕ್ರಮ ಸಂಖ್ಯೆಯನ್ನು ಪೂರ್ವನಿಯೋಜಿತವಾಗಿ ಪ್ರಿಂಟ್ ಮಾಡಿರುತ್ತದೆ ಎಂದು ಶಾಸಕ ಬಿ ಆರ್ ಪಾಟೀಲ ಹರಿದಾಡುತ್ತಿರುವ ಈ ಪತ್ರದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು: ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ; ಮೂವರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement