ನವದೆಹಲಿ: ಸ್ಟಾರ್ (*) ಚಿಹ್ನೆ ಹೊಂದಿರುವ ಬ್ಯಾಂಕ್ ನೋಟುಗಳು ನಕಲಿ ಎನ್ನುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಊಹಾಪೋಹಗಳ ಬಗ್ಗೆ ಆರ್ಬಿಐ ಈ ಸ್ಪಷ್ಟನೆ ನೀಡಿದ್ದು, ಸ್ಟಾರ್ (*) ಚಿಹ್ನೆ ಹೊಂದಿರುವ ನೋಟುಗಳು ಕಾನೂನುಬದ್ಧವಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 27 ರಂದು ನಕ್ಷತ್ರ (*) ಚಿಹ್ನೆಯನ್ನು ಹೊಂದಿರುವ ಬ್ಯಾಂಕ್ ನೋಟುಗಳು ಇತರ ಬ್ಯಾಂಕ್ ನೋಟುಗಳಂತೆಯೇ ಕಾನೂನು ಬದ್ಧವಾದ ನೋಟುಗಳಾಗಿವೆ ಎಂದು ಸ್ಪಷ್ಟಪಡಿಸಿದೆ. ನಕ್ಷತ್ರ ಚಿಹ್ನೆಯು ನೋಟುಗಳನ್ನು ಬದಲಿಸಿದ ಅಥವಾ ಮರುಮುದ್ರಣ ಮಾಡಿದ ನೋಟು ಆಗಿದೆ ಎಂದು ಆರ್ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಟಾರ್ ಚಿಹ್ನೆಯೊಂದಿಗೆ ನೋಟುಗಳ ಸಿಂಧುತ್ವದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಬಂದಿದೆ.
ಬೇರೆಲ್ಲ ನೋಟುಗಳಲ್ಲಿ ಸಾಮಾನ್ಯವಾಗಿ ಮೂರು ಅಕ್ಷರಗಳ ಬಳಿಕ ನಂಬರ್ಗಳಿದ್ದರೆ, ಸ್ಟಾರ್ ಚಿಹ್ನೆಯ ನೋಟುಗಳಲ್ಲಿ ಸೀರಿಯಲ್ ನಂಬರ್ಗೂ ಮುನ್ನ ಸ್ಟಾರ್ ಚಿಹ್ನೆ ಇದೆ. ಈ ನೋಟುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಆರ್ ಬಿಐ, 100 ಸರಣಿ ಸಂಖ್ಯೆಯ ಕರೆನ್ಸಿ ನೋಟುಗಳ ಪ್ಯಾಕೆಟ್ನಲ್ಲಿ ದೋಷಯುಕ್ತವಾಗಿ ಮುದ್ರಿತ ನೋಟುಗಳು ಕಂಡುಬಂದರೆ ಅವುಗಳಿಗೆ ಬದಲಿಯಾಗಿ ಬಳಸಲಾಗುವ ಬ್ಯಾಂಕ್ ನೋಟಿನ ಸಂಖ್ಯೆಯ ಫಲಕದಲ್ಲಿ ನಕ್ಷತ್ರ ಚಿಹ್ನೆಯನ್ನು ಮುದ್ರಣ ಮಾಡಲಾಗಿದೆ. ಪ್ರಿಂಟಿಗ್ ಮಾಡುವಾಗ ದೋಷವಾದಾಗ ಅಥವಾ ತಪ್ಪಾಗಿ ಪ್ರಿಂಟ್ ಆದಾಗ ಅಂಥಾ ನೋಟುಗಳ ಮರುಮುದ್ರಣ ಮಾಡಲಾಗುತ್ತದೆ. ಆದರೆ, ಅದೇ ಸೀರಿಯಲ್ ನಂಬರ್ಗಳ ಮುನ್ನ ಸ್ಟಾರ್ ಚಿಹ್ನೆ ಹಾಕಲಾಗುತ್ತದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ