ದಾವಣಗೆರೆ : ಖಾಸಗಿ ಕ್ಷಣದ ವೀಡಿಯೊ ವೈರಲ್ ; ಮನನೊಂದು ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ

ದಾವಣಗೆರೆ: ವಿದ್ಯಾರ್ಥಿಗಳಿಬ್ಬರ ಖಾಸಗಿ ಕ್ಷಣಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಮನನೊಂದ ವಿದ್ಯಾರ್ಥಿಗಳಿಬ್ಬರು ಸಾವಿನ ಹಿಡಿದ ಘಟನೆ ದಾವಣಗೆರೆಯಲ್ಲಿ ನಡೆದ ವರದಿಯಾಗಿದೆ.
ಮೃತರನ್ನು ಆಲೂರಟ್ಟಿ ತಾಂಡಾದ ರತನ್ (20) ಮತ್ತು ಜಗಳೂರು ತಾಲೂಕಿನ ಗ್ರಾಮವೊಂದರ ಯುವತಿ ಎಂದು ಹೇಳಲಾಗಿದೆ. ಇಬ್ಬರೂ ದಾವಣಗೆರೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಾಗಿದ್ದರು ಹಾಗೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ನಗರದ ಖಾಸಗಿ ಕಾಲೇಜೊಂದರ ಟೆರೆಸ್ ಮೇಲೆ ಇಬ್ಬರು ಏಕಾಂತದಲ್ಲಿದ್ದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಶುಕ್ರವಾರ ವೈರಲ್‌ ಆಗಿತ್ತು. ಅವರ ಅರಿವಿಗೆ ಬಾರದಂತೆ ಪಕ್ಕದ ಕಟ್ಟಡದಲ್ಲಿ ಕುಳಿತಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು ಎಂಬ ಅಂಶ ಬಳಿಕ ಬೆಳಕಿಗೆ ಬಂದಿದೆ.
ಕೆಲವು ಖಾಸಗಿ ಆನ್‌ಲೈನ್ ವೆಬ್‌ಸೈಟ್ ಗಳಲ್ಲಿಯೂ ಪ್ರಸಾರವಾಗಿತ್ತು. ಇದರಿಂದ ವಿಚಲಿತಳಾಗಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ವಿದ್ಯಾರ್ಥಿನಿಯ ಆತ್ಮಹತ್ಯೆಯಿಂದ ಮನನೊಂದ ವಿದ್ಯಾರ್ಥಿ ಕೂಡ ಶುಕ್ರವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ವಿದ್ಯಾರ್ಥಿಗಳಿಬ್ಬರ ಪೋಷಕರು ಪ್ರತ್ಯೇಕವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement