ಬೆಂಗಳೂರು: ಅಸಂತುಷ್ಟರಾಗಿರುವ ಸ್ವಪಕ್ಷೀಯ ಶಾಸಕರನ್ನು ಸಮಾಧಾನಪಡಿಸಲು ಮುಂದಾಗಿರುವ ಸರ್ಕಾರ, ಶುಕ್ರವಾರ ಒಂದೇ ದಿನ ಬರೋಬ್ಬರಿ 146 ತಹಶೀಲ್ದಾರ್ಗಳನ್ನು ವರ್ಗಾಯಿಸಿದೆ. ಪಕ್ಷದ ಶಾಸಕರು ಬಯಸಿದ ತಹಶೀಲ್ದಾರ್ಗಳನ್ನೇ ಪೋಸ್ಟಿಂಗ್ ಮಾಡಲಾಗಿದೆ.
ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಮೂರು ವಾರಗಳ ಬಳಿಕ ಮೂರು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಒಟ್ಟು 146 ಗ್ರೇಡ್ -1 ಮತ್ತು ಗ್ರೇಡ್ -2 ತಹಶೀಲ್ದಾರ್ಗಳ ವರ್ಗಾವಣೆಗೆ ಆದೇಶಗಳು ಹೊರಬಿದ್ದಿವೆ.
ತಹಶೀಲ್ದಾರ್ಗಳ ವರ್ಗಾವಣೆ, ಪೋಸ್ಟಿಂಗ್ ಸಂಬಂಧದ ತಮ್ಮ ಶಿಫಾರಸು ಹಾಗೂ ಕೋರಿಕೆ ಪತ್ರಗಳಿಗೆ ಮನ್ನಣೆ ಸಿಗದಿರುವುದು ಶಾಸಕರಲ್ಲಿ ತೀವ್ರ ಅತೃಪ್ತಿ ಸೃಷ್ಟಿಸಿತ್ತು. ಈ ಸಂಬಂಧ ಅನೇಕ ಶಾಸಕರು ನೀಡಿದ್ದ ದೂರು ಬಹಿರಂಗವಾಗಿ ಸರಕಾರಕ್ಕೆ ಮುಜುಗರವಾಗಿತ್ತು. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್ಪಿ) ನಡೆದಿತ್ತು.
ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿದ್ದ ತಹಶೀಲ್ದಾರ್ಗಳ ವರ್ಗಾವಣೆ ಪಟ್ಟಿಗೆ ಸಹಿ ಹಾಕಿದ್ದಾರೆ. ಒಂದೇ ದಿನದಲ್ಲಿ 146 ತಹಸೀಲ್ದಾರ್ಗಳನ್ನು ವರ್ಗಾವಣೆ ಮಾಡಲಾಗಿದೆ. ಆ ಮೂಲಕ ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ