ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಕಾನ್ಸ್ಟೇಬಲ್ ಸೋಮವಾರ ಮುಂಜಾನೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಕಾನ್ಸ್ಟೇಬಲ್ ತನ್ನ ಸ್ವಯಂಚಾಲಿತ ಗನ್ ನಿಂದ ಗುಂಡು ಹಾರಿಸಿ ರೈಲಿನಲ್ಲಿದ್ದ ಆರ್ಪಿಎಫ್ ಎಎಸ್ಐ ಮತ್ತು ಇತರ ಮೂವರು ಪ್ರಯಾಣಿಕರನ್ನು ಕೊಂದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪಾಲ್ಘರ್ ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿದೆ.
ಚೇತನಕುಮಾರ ಚೌಧರಿ ಚಲಿಸುತ್ತಿರುವ ರೈಲಿನಲ್ಲಿ ತಮ್ಮ ಎಸ್ಕಾರ್ಟ್ ಡ್ಯೂಟಿ ಇನ್ ಚಾರ್ಜ್ ಎಎಸ್ಐ ಟಿಕಾ ರಾಮ್ ಮೀನಾ ಮೇಲೆ ಗುಂಡು ಹಾರಿಸಿದ್ದಾನೆ. ತನ್ನ ಮೇಲಧಿಕಾರಿಯನ್ನು ಕೊಂದ ನಂತರ, ಕಾನ್ಸ್ಟೆಬಲ್ ಮತ್ತೊಂದು ಬೋಗಿಗೆ ಹೋಗಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಸರ್ಕಾರಿ ರೈಲ್ವೇ ಪೊಲೀಸರು ಮತ್ತು ಆರ್ಪಿಎಫ್ ಅಧಿಕಾರಿಗಳ ಸಹಾಯದಿಂದ ಕಾನ್ಸ್ಟೇಬಲ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಮುಂಜಾನೆ 5.23ಕ್ಕೆ ಜೈಪುರ ಎಕ್ಸ್ಪ್ರೆಸ್ ರೈಲಿನ (12956) B5 ಕೋಚ್ನಲ್ಲಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ.
“ಜುಲೈ 31, 2023 ರಂದು, ರೈಲು ಸಂಖ್ಯೆ 12956 ಜೈಪುರ – ಮುಂಬೈ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಬೆಂಗಾವಲು ಪಡೆ ಕಾನ್ಸ್ಟೇಬಲ್ ಚೇತನಕುಮಾರ ತಮ್ಮ ಸಹೋದ್ಯೋಗಿ ಬೆಂಗಾವಲು ಪ್ರಭಾರ ಎಎಸ್ಐ ಟಿಕಾ ರಾಮ್ ಮೇಲೆ ಗುಂಡು ಹಾರಿಸಿದ್ದಾನೆ. ಎಎಸ್ ಐ ಟಿಕಾ ರಾಮ್ ಮತ್ತು ಮೂವರು ಪ್ರಯಾಣಿಕರ ಮೇಲೆ ಗುಂಡು ಹಾರಿಸಿರುವುದು ವಿಷಾದನೀಯ. ಅಲಾರ್ಮ್ ಚೈನ್ ಪುಲ್ಲಿಂಗ್ ಬಳಿಕ ಕಾನ್ಸ್ಟೇಬಲ್ ಚೇತನ ಕುಮಾರ ದಹಿಸರ್ ಬಳಿ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಆರ್ಪಿಎಫ್ ಆತನನ್ನು ಶಸ್ತ್ರಾಸ್ತ್ರಗಳ ಸಮೇತ ಬಂಧಿಸಿದೆ ಎಂದು ಪಶ್ಚಿಮ ರೈಲ್ವೇ ವಕ್ತಾರರು ತಿಳಿಸಿದ್ದಾರೆ.
ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಪಿಆರ್ಒ ಸುಮಿತ್ ಠಾಕೂರ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ