ಜ್ಞಾನವಾಪಿ ಆವರಣದಲ್ಲಿ ಎಎಸ್‌ಐ ಸರ್ವೆಗೆ ಅನುಮತಿ: ಮಸೀದಿ ಸಮಿತಿ ಮನವಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ನವದೆಹಲಿ: ಗ್ಯಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಜ್ಞಾನವಾಪಿ ಆವರಣದಲ್ಲಿ ಸಮೀಕ್ಷೆಯನ್ನು ಮುಂದುವರೆಸಲಿದೆ ಎಂದು ಅಲಹಾಬಾದ್ ಹೈಕೋರ್ಟ್ ಇಂದು, ಗುರುವಾರ ( ಆಗಸ್ಟ್‌ ೩) ತೀರ್ಪು ನೀಡಿದೆ ಹಾಗೂ ಇದು ನ್ಯಾಯದ ಹಿತದೃಷ್ಟಿಯಲ್ಲಿದೆ ಎಂದು ಹೇಳಿದೆ.
ಕಳೆದ ತಿಂಗಳು ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಎಎಸ್‌ಐಗೆ ವಾರಾಣಸಿ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧ ಮುಸ್ಲಿಂ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
“ವಾರಾಣಸಿ ಕೋರ್ಟ್ ಜ್ಞಾನವಾಪಿ ಆವರಣದಲ್ಲಿ ಎಎಸ್‌ಐ ಸಮೀಕ್ಷೆಗೆ ಆದೇಶ ನೀಡಿರುವುದು ಸಮರ್ಥನೆಯಾಗಿದೆ. ನ್ಯಾಯದ ಹಿತದೃಷ್ಟಿಯಿಂದ ವೈಜ್ಞಾನಿಕ ಸಮೀಕ್ಷೆ ಅಗತ್ಯ. ಸಮೀಕ್ಷೆಯನ್ನು ತಕ್ಷಣವೇ ಪುನರಾರಂಭಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸಮೀಕ್ಷೆಯನ್ನು ಪ್ರಾರಂಭಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದು ಜ್ಞಾನವಾಪಿ ಸಮೀಕ್ಷೆ ಪ್ರಕರಣದಲ್ಲಿ ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದರು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು, “ನಾನು ಈ ತೀರ್ಪನ್ನು ಸ್ವಾಗತಿಸುತ್ತೇನೆ, ಎಎಸ್ಐ ಸಮೀಕ್ಷೆಯ ನಂತರ ಸತ್ಯ ಹೊರಬರುತ್ತದೆ ಮತ್ತು ಇದು ಜ್ಞಾನವಾಪಿ ಸಮಸ್ಯೆಯನ್ನು ಪರಿಹರಿಸುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ಜುಲೈ 27 ರಂದು ಎಎಸ್‌ಐ ಸಮೀಕ್ಷೆ ವಿರುದ್ಧದ ಅರ್ಜಿಯ ತೀರ್ಪನ್ನು ನ್ಯಾಯಾಲಯವು ಆಗಸ್ಟ್ 3 ಕ್ಕೆ ಕಾಯ್ದಿರಿಸಿತ್ತು.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

ಮೊದಲು ದೇವಾಲಯವಿದ್ದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಅಗತ್ಯವಿರುವಲ್ಲೆಲ್ಲಾ ಉತ್ಖನನ ಸೇರಿದಂತೆ ಸಮೀಕ್ಷೆಯನ್ನು ನಡೆಸುವಂತೆ ಜುಲೈ 21 ರಂದ ವಾರಾಣಸಿ ನ್ಯಾಯಾಲಯವು ಎಎಸ್‌ಐಗೆ ನಿರ್ದೇಶನ ನೀಡಿತು.
ಎಎಸ್‌ಐ ಜುಲೈ 24 ರಂದು ಸಮೀಕ್ಷೆಯನ್ನು ಪ್ರಾರಂಭಿಸಿತ್ತು, ಆದರೆ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ ಸಂಪರ್ಕಿಸಿದ ನಂತರ ವಾರಾಣಸಿ ಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿ ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಿತಿಗೆ ಸಮಯಾವಕಾಶ ನೀಡಿತು. ಸರ್ವೆ ಮತ್ತು ಉತ್ಖನನದಿಂದ ಕಟ್ಟಡಕ್ಕೆ ಹಾನಿಯಾಗುತ್ತದೆ ಎಂದು ಮಸೀದಿ ಸಮಿತಿ ಪರ ವಕೀಲರು ಆತಂಕ ವ್ಯಕ್ತಪಡಿಸಿದ್ದರು. ಸಮೀಕ್ಷೆಯು ರಚನೆಯನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ಹಿಂದೂ ಚಿಹ್ನೆಗಳನ್ನು ರಕ್ಷಿಸುವಂತೆ ಕೋರಿ ಹೊಸ ಅರ್ಜಿ…
ವಾರಾಣಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ “ಹಿಂದೂ ಚಿಹ್ನೆಗಳ” ರಕ್ಷಣೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಜ್ಞಾನವಾಪಿ-ಶೃಂಗಾರ ಗೌರಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ರಾಖಿ ಸಿಂಗ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಪಿಐಎಲ್ ಪ್ರಕಾರ, ಶೃಂಗಾರ ಗೌರಿ ಪ್ರಕರಣದಲ್ಲಿ ವಾರಾಣಸಿ ನ್ಯಾಯಾಲಯದ ತೀರ್ಪು ಬರುವವರೆಗೆ ಹಿಂದೂಯೇತರರು ಆವರಣ ಪ್ರವೇಶಿಸುವುದನ್ನು ನಿಷೇಧಿಸಬೇಕು ಮತ್ತು ಜ್ಞಾನವಾಪಿ ಆವರಣದಲ್ಲಿ ಕಂಡುಬರುವ ಹಿಂದೂ ಚಿಹ್ನೆಗಳನ್ನು ರಕ್ಷಿಸಲು ಆದೇಶ ನೀಡಬೇಕು ಎಂದು ಕೋರಲಾಗಿದೆ. ಪ್ರಕರಣದ ವಿಚಾರಣೆಯನ್ನು ಆಗಸ್ಟ್ 7 ರಂದು ನಿಗದಿಪಡಿಸಲಾಗಿದೆ.
ಏತನ್ಮಧ್ಯೆ, ಇಂತೇಜಾಮಿಯಾ ಮಸೀದಿ ಸಮಿತಿಯ ಕಾರ್ಯದರ್ಶಿ ಮೊಹಮ್ಮದ್ ಯಾಸಿನ್ ಅವರು ಹೊಸ ಅರ್ಜಿಯ ಪ್ರತಿಯನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಅರ್ಜಿಯ ಪ್ರತಿಯನ್ನು ನಾವು ಸ್ವೀಕರಿಸಿದ ನಂತರ, ನಮ್ಮ ಕಾನೂನು ತಂಡವು ಅದರ ಉತ್ತರವನ್ನು ಸಿದ್ಧಪಡಿಸುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ಜ್ಞಾನವಾಪಿ ಮಸೀದಿ ವಿವಾದ

ಈ ಹಿಂದೆ ದೇವಾಲಯವೊಂದು ಅಸ್ತಿತ್ವದಲ್ಲಿತ್ತು ಎಂದು ಹೇಳಿಕೊಂಡು ಎಲ್ಲಾ ದಿನಗಳಲ್ಲಿ ಮಸೀದಿಯ ಸಂಕೀರ್ಣದಲ್ಲಿರುವ ಹಿಂದೂ ದೇವತೆಯ ಪೂಜೆಗೆ ಅನುಮತಿ ನೀಡುವಂತೆ ಕೋರಿ ಕೆಲ ಮಹಿಳೆಯರು ವಾರಾಣಸಿಯ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ನ್ಯಾಯಾಲಯವು 2022 ರಲ್ಲಿ ಈ ಅರ್ಜಿಯ ಆಧಾರದ ಮೇಲೆ ಸಂಕೀರ್ಣದ ವೀಡಿಯೊ ಸಮೀಕ್ಷೆಗೆ ಆದೇಶಿಸಿತು. ಸಮೀಕ್ಷೆಯ ಸಮಯದಲ್ಲಿ ಅರ್ಜಿದಾರರು ‘ಶಿವಲಿಂಗ’ ಎಂದು ಹೇಳಿಕೊಳ್ಳುತ್ತಿರುವ ರಚನೆಯು ಪತ್ತೆಯಾಯಿತು.
ಆದರೆ ಮಸೀದಿ ಆಡಳಿತ ಸಮಿತಿಯು ಈ ರಚನೆಯು ‘ವಝುಖಾನಾ’ದಲ್ಲಿನ ಕಾರಂಜಿಯ ಭಾಗವಾಗಿದೆ, ಇದು ನೀರಿನಿಂದ ತುಂಬಿದ ಪ್ರದೇಶವಾಗಿದ್ದು, ಜನರು ಪ್ರಾರ್ಥನೆ ಮಾಡುವ ಮೊದಲು ಕೈಕಾಲು ತೊಳೆಯುತ್ತಾರೆ ಎಂದು ಪ್ರತಿಪಾದಿಸಿದೆ.
ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ಸುಪ್ರೀಂ ಕೋರ್ಟ್ ಆಪಾದಿತ ‘ಶಿವಲಿಂಗ’ದ ಪ್ರದೇಶವನ್ನು ಸೀಲಿಂಗ್ ಮಾಡಲು ಆದೇಶಿಸಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement