ಬೆಂಗಳೂರು: ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರು ಭಾನುವಾರ (ಆಗಸ್ಟ್ 6) ಸಂಜೆ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದು ತಕ್ಷಣವೇ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾರಿ ಬಿದ್ದಿರುವ ತಿಮ್ಮಕ್ಕ ಅವರಿಗೆ ಬೆನ್ನು ಮೂಳೆಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಾಲುಮರದ ತಿಮ್ಮಕ್ಕ ಅವರಿಗೆ 112 ವರ್ಷವಾಗಿದೆ. ಅವರ ಬೆನ್ನಿನ ಭಾಗಕ್ಕೆ ಸ್ವಲ್ಪ ಏಟು ಬಿದ್ದಿದ್ದು, ಇನ್ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಜನಿಸಿರುವ ತಿಮ್ಮಕ್ಕ ಅಪ್ಪಟ ಪರಿಸರ ಪ್ರೇಮಿ. ಸುಮಾರು 65 ವರ್ಷಗಳ ಕಾಲ 8 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಡುವ ಮೂಲಕ ವೃಕ್ಷಮಾತೆ ಎನಿಸಿಕೊಂಡಿದ್ದಾರೆ. ವೃಕ್ಷಗಳನ್ನು ನೆಡುವುದು ಮಾತ್ರವಲ್ಲ ಅವುಗಳನ್ನು ಪೋಷಿಸಿ ಹೆಮ್ಮರವಾಗಿ ತಮ್ಮ ಸ್ವಂತ ಮಕ್ಕಳಂತೆ ಆರೈಕೆ ಮಾಡಿ ರಕ್ಷಿಸಿದ್ದಾರೆ. ಇವರ ನಿಸ್ವಾರ್ಥ ಸೇವೆಗಾಗಿ 2019 ರಲ್ಲಿ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿ ಗೌರವಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ