ಏಕರೂಪ ನಾಗರಿಕ ಸಂಹಿತೆ ಜಾರಿ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ತಿರುವನಂತಪುರಂ: ಕೇಂದ್ರ ಸರ್ಕಾರದ ಉದ್ದೇಶಿತ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವುದರ ವಿರುದ್ಧ ಕೇರಳ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.
ಮಂಗಳವಾರ, ಆಗಸ್ಟ್ 8 ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯವು, ದೇಶದಲ್ಲಿ ಯುಸಿಸಿ ಜಾರಿಗೆ ತರಲು ಕೇಂದ್ರ ಸರ್ಕಾರದ “ಏಕಪಕ್ಷೀಯ ಮತ್ತು ಆತುರದ ನಡೆ” ಭಾರತೀಯ ಸಂವಿಧಾನದ “ಜಾತ್ಯತೀತ ಗುಣ” ವನ್ನು ರದ್ದುಗೊಳಿಸುತ್ತದೆ ಎಂದು ಹೇಳಿದೆ.
ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್‌) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್‌) ಈಗಾಗಲೇ ಯುಸಿಸಿ ಬಗ್ಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಸ್ಪಷ್ಟಪಡಿಸಿದ್ದವು.
ಪ್ರಸ್ತಾವಿತ ಶಾಸನವು ಕೇರಳ ವಿಧಾನಸಭೆ ಸೇರಿದಂತೆ ಜನಸಂಖ್ಯೆಯ ವಿವಿಧ ವರ್ಗಗಳಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿರುವ ನಿರ್ಣಯವು, ಕೇಂದ್ರ ಸರ್ಕಾರವು ಒಮ್ಮತ ಬಯಸದೆ ಅಥವಾ ಸೈದ್ಧಾಂತಿಕ ಚರ್ಚೆಯಲ್ಲಿ ತೊಡಗದೆ ಏಕಪಕ್ಷೀಯ ನಿರ್ಧಾರದೊಂದಿಗೆ ಮುಂದುವರಿಯುತ್ತಿದೆ ಎಂದು ಆರೋಪಿಸಿದೆ.
ಏಕ ನಾಗರಿಕ ಸಂಹಿತೆಯು ಜನರ ಐಕ್ಯತೆಗೆ ಧಕ್ಕೆ ತರುವ ಮತ್ತು ರಾಷ್ಟ್ರದ ಒಗ್ಗಟ್ಟಿಗೆ ಹಾನಿಕಾರಕವಾದ ವಿಭಜಕ ಕ್ರಮವಾಗಿದೆ” ಎಂದು ನಿರ್ಣಯವು ಹೇಳಿದೆ. ಇಂತಹ ಕ್ರಮಗಳನ್ನು ತೆಗೆದುಕೊಳ್ಳದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನ “ಚುನಾವಣಾ ಅಜೆಂಡಾ” ದ ಭಾಗವಾಗಿ ಯುಸಿಸಿ ವಿಷಯವನ್ನು ಪ್ರಸ್ತಾಪಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ಇತ್ತೀಚೆಗೆ ಆರೋಪಿಸಿದ್ದರು. ಪ್ರಸ್ತಾವನೆಯನ್ನು ಏಕಪಕ್ಷೀಯವಾಗಿ ಮುಂದುವರಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅಳಿಸಿಹಾಕುವ ಮತ್ತು ಒಂದು ರಾಷ್ಟ್ರ, ಒಂದು ಸಂಸ್ಕೃತಿಯನ್ನು ಭಾರತದಲ್ಲಿ ಹೇರುವ ಪ್ರಯತ್ನಗಳ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಾಸಂಗಿಕವಾಗಿ, ಕೇರಳ ವಿಧಾನಸಭೆಯು ಡಿಸೆಂಬರ್ 2019 ರಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಿದ ಭಾರತದ ಮೊದಲ ರಾಜ್ಯವಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement