ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ಕೆಂಪಣ್ಣ : ಕಾಮಗಾರಿಗಳ ತನಿಖೆಗೆ ಎಸ್‌ಐಟಿ ರಚನೆಗೆ ವಿರೋಧ

ಬೆಂಗಳೂರು : ಕಳೆದ ಸರ್ಕಾರದ ವಿರುದ್ಧ ಕಮಿಷನ್​ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗ ಕಾಂಗ್ರೆಸ್​ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ಹೇಳಿದ್ದಾರೆ.
ಇಂದು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಂಪಣ್ಣ ಅವರು, ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ. ಯಾವ ಸಚಿವರೂ ಕಮಿಷನ್ ಕೇಳಿಲ್ಲ. ಆದರೆ ಏಳು ತಿಂಗಳಿಂದ ಗುತ್ತಿಗೆದಾರರಿಗೆ ಬಿಲ್‌ ಹಣ ಬಾಕಿ ಇದೆ. ಹೀಗಾಗಿ ಸರ್ಕಾರ ಆಗಸ್ಟ್ 31ರೊಳಗೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬೇಕು ಎಂದು ಕೆಂಪಣ್ಣ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ.
ಬಾಕಿಯಲ್ಲಿ ಸ್ವಲ್ಪ ಹಣ ಮಾತ್ರ ಬಿಡುಗಡೆಯಾಗಿದೆ. ನೂರು ಕೋಟಿ ಹಣ ಬಿಡುಗಡೆ ಮಾಡಿದ್ದು ಸಾಕಾಗುವುದಿಲ್ಲ. ಸುಮಾರು 25 ಸಾವಿರ ಕೋಟಿ ರೂ.ಗಳಷ್ಟು ಬಿಲ್ ಹಣ ಬಾಕಿ ಇದೆ. ಈ ಬಗ್ಗೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಹಾಗು ಸಚಿವರನ್ನು ಭೇಟಿ ಮಾಡುತ್ತೇವೆ. ಎಷ್ಟೋ ಭಾಗ್ಯಗಳನ್ನು ಸರ್ಕಾರ ಕೊಟ್ಟಿದೆ. ನಮಗೂ ಕಂಟ್ರಾಕ್ಟರ್ ಭಾಗ್ಯ ಕೊಡಿ ಎಂದು ಕೇಳಿದರು.
ಆಗಸ್ಟ್ 31ರೊಳಗೆ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇವೆ. ಎಲ್ಲರನ್ನೂ ಕರೆದು ಸಭೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೆಂಪಣ್ಣ ತಿಳಿಸಿದರು.
ಅವರ ಪರವಾಗಿ ನಿಲ್ಲುತ್ತೇವೆ
ಎಲ್ಲಾ ಕಾಮಗಾರಿ ವಿಶೇಷ ತಂಡ ರಚಿಸಿ ತನಿಖೆ ಮಾಡುವುದಾಗಿ ಹೇಳಿದ್ದಾರೆ, ನಮಗೆ ಕಾಮಗಾರಿ ಗ್ಯಾರಂಟಿ ಅವಧಿ ಇರುವುದೇ ಒಂದು ವರ್ಷ. ಮೂರು ವರ್ಷವಾದರೂ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ನಾವು ಕಾಂಗ್ರೆಸ್ ಸರ್ಕಾರದ ಈ ತನಿಖೆಯನ್ನು ವಿರೋಧ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement