ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ; ಮುಖ್ಯ ಇಂಜಿನಿಯರ್ ಸೇರಿ 9 ಜನರಿಗೆ ಗಾಯ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕೇಂದ್ರ ಕಚೇರಿಯ ಆವರಣದ ಕಟ್ಟಡವೊಂದರಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, 9ಕ್ಕೂ ಹೆಚ್ಚು ನೌಕರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಸಂಜೆ ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್‌ ಮತ್ತು ಕಚೇರಿ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿಯನ್ನು ಸಂಪೂರ್ಣ ನಂದಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ.
ಘಟನೆಯಲ್ಲಿ ಬಿಎಂಪಿಯ 9ಕ್ಕೂ ಹೆಚ್ಚು ನೌಕರರಿಗೂ ಸುಟ್ಟು ಗಾಯಗಳಾಗಿದ್ದು, ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಷಾರ್ ಗಿರಿನಾಥ್‌ ಮಾಧ್ಯಮದವರೊಂದಿಗೆ ಮಾತನಾಡಿ, ಶುಕ್ರವಾರ ಸಂಜೆ ಸಂಜೆ 5 ರಿಂದ 5:30 ರ ನಡುವೆ ಈ ಘಟನೆ ನಡೆದಿದೆ. ನಮ್ಮ ಕಚೇರಿಯ ಹಿಂಭಾಗದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ನನಗೆ ತಿಳಿಯಿತು. ನಾನು ಅಲ್ಲಿಗೆ ಹೋದಾಗ, ಕಟ್ಟಡದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಿಂದ ಅಪಾರ ನಷ್ಟ ಸಂಭವಿಸಿದೆ.
ಮುಖ್ಯ ಇಂಜಿನಿಯರ್ ಸೇರಿದಂತೆ ಒಂಬತ್ತು ಸಿಬ್ಬಂದಿಗೆ ಗಾಯಗಳಾಗಿವೆ. ಅವರಲ್ಲಿ ಇಬ್ಬರು ಮಹಿಳಾ ಉದ್ಯೋಗಿಗಳೂ ಸೇರಿದ್ದಾರೆ ಎಂದು ಹೇಳಲಾಗಿದೆ.ಗಾಯಾಳುಗಳನ್ನು ಸಮೀಪದ ಸೈಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗಕ್ಕೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗಾಐಾಳುಗಳನ್ನು ಭೇಟಿ ಮಾಡಿದ ಸಿಎಂ, ಡಿಸಿಎಂ:
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಸುಟ್ಟ ಗಾಯಗಳ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಾಯಾಳುಗಳನ್ನು 48 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ. ಒಬ್ಬರಿಗೆ ಶೇ 38ರಷ್ಟು ಸುಟ್ಟಗಾಯಗಳಾಗಿವೆ. ಎಲ್ಲ ಗಾಯಾಳುಗಳನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ. ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ ; ಸೋನು ನಿಗಮ್‌ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement