ಬೆಂಗಳೂರು: ಚಂದ್ರಯಾನ – 3 ಬಾಹ್ಯಾಕಾಶ ನೌಕೆ ಚಂದ್ರನಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಇಸ್ರೋ ನಿಯಂತ್ರಣ ಕೇಂದ್ರದ ತಜ್ಞರು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಬಳಿಗೆ ಮತ್ತಷ್ಟು ಸಮೀಪ ಹೋಗುವಂತೆ ನೋಡಿಕೊಂಡಿದ್ದಾರೆ.
ನೌಕೆಯನ್ನು ಕ್ರಮೇಣವಾಗಿ ಹೆಚ್ಚು-ಅಂಡಾಕಾರದ ಕಕ್ಷೆಯಿಂದ (174 km x 1437 km) ಚಂದ್ರನ ಸುತ್ತ ವೃತ್ತಾಕಾರದ ಕಕ್ಷೆಗೆ (150km x 177km) ಸ್ಥಳಾಂತರಿಸಲಾಗಿದೆ. ಈಗ ನೌಕೆಯು ಚಂದ್ರನಿಂದ 150 ಕಿ. ಮೀ. X 177 ಕಿ. ಮೀ. ದೂರದ ಕಕ್ಷೆಯ ಒಳಗೆ ಸುತ್ತುತ್ತಿದೆ. ಆಗಸ್ಟ್ 16 ರಂದು ಬೆಳಗ್ಗೆ 8:30ಕ್ಕೆ ಮತ್ತೊಮ್ಮೆ ಬಾಹ್ಯಾಕಾಶ ನೌಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಚಂದ್ರನಿಗೆ ಮತ್ತಷ್ಟು ಸನಿಹ ಹೋಗುವಂತೆ ಮಾಡಲು ಇಸ್ರೋ ಮತ್ತೊಮ್ಮೆ ಪ್ರಯತ್ನಿಸುತ್ತಾರೆ. ಚಂದ್ರಯಾನ – 3 ಬಾಹ್ಯಾಕಾಶ ನೌಕೆಯು 100 ಕಿ.ಮೀ ಕಕ್ಷೆ ತಲುಪಿದ ನಂತರ ವಿಕ್ರಂ ಲ್ಯಾಂಡರ್ ಅದರಿಂದ ಬೇರ್ಪಡಲಿದೆ.
ಆಗಸ್ಟ್ 9 ರಂದು ಇಸ್ರೋ ನಿಯಂತ್ರಣ ಕೇಂದ್ರದ ತಜ್ಞರು ಚಂದ್ರಯಾನ 3 ಗಗನ ನೌಕೆಯನ್ನು ಚಂದ್ರನಿಂದ 174 ಕಿ. ಮೀ. X 1,437 ಕಿ. ಮೀ. ದೂರದ ಕಕ್ಷೆ ತಲುಪುವಂತೆ ನೋಡಿಕೊಂಡಿತ್ತು. ಆಗಸ್ಟ್ 6 ರಂದೂ ಕೂಡಾ ನೌಕೆಯನ್ನು ಚಂದ್ರನಿಗೆ ಇನ್ನಷ್ಟು ಸನಿಹ ಮಾಡಲಾಗಿತ್ತು.
ನೌಕೆಯನ್ನು ಚಂದ್ರನ ಮೇಲ್ಮೈಯಿಂದ 100 ಕಿಮೀ ಎತ್ತರದಲ್ಲಿರುವ ವೃತ್ತಾಕಾರದ ಕಕ್ಷೆಗೆ ತರುವುದು ಇಸ್ರೋದ ಮುಂದಿನ ಗುರಿಯಾಗಿದೆ. ಇದನ್ನು ಇಸ್ರೋ ಕಕ್ಷೆಯ ʼಪರಿಚಲನೆಯ ಹಂತʼ ಎಂದು ಕರೆಯುತ್ತದೆ. ಈ ಕಕ್ಷೆಯನ್ನು ಸಾಧಿಸಿದಾಗ, ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸ್ಥಿರವಾದ 100 ಕಿಮೀ ದೂರದಲ್ಲಿ, ಆ ಕಕ್ಷೆಯಲ್ಲಿ ಯಾವುದೇ ಸಮಯದಲ್ಲಿ ಇರುತ್ತದೆ.
ಕ್ರಾಫ್ಟ್ ಚಂದ್ರನ ಸುತ್ತಲೂ ಸುತ್ತುತ್ತಿರುವಾಗ, ಕ್ರಾಫ್ಟ್ ಅನ್ನು 180 ಡಿಗ್ರಿಗಳಷ್ಟು ಮರು-ಓರಿಯಂಟ್ ಮಾಡಲು ಆದೇಶವನ್ನು ನೀಡಲಾಗುತ್ತದೆ. ಈ ಮರು-ಓರಿಯಂಟೇಶನ್ ನೌಕೆಯ ಎಂಜಿನ್ (ಗಳನ್ನು) ಬ್ರೇಕ್ ಆಗಿ ಬಳಸಬಹುದೆಂದು ಖಚಿತಪಡಿಸುತ್ತದೆ. ಅಂತಹ ಎಂಜಿನ್ ಫೈರಿಂಗ್ ಗಳನ್ನು ರೆಟ್ರೊ-ಫೈರಿಂಗ್ಗಳು ಕರೆಯಲಾಗುತ್ತದೆ. ರೆಟ್ರೊ-ಫೈರಿಂಗ್ನಲ್ಲಿ, ಇಂಜಿನ್ ಕ್ರಾಫ್ಟ್ ಅನ್ನು ಮುಂದಕ್ಕೆ ತಳ್ಳುವುದಿಲ್ಲ. ಬದಲಿಗೆ, ಅದು ಕ್ರಾಫ್ಟ್ ಅನ್ನು ಅದರ ಮೂಲ ಚಲನೆಯ ದಿಕ್ಕಿನ ವಿರುದ್ಧ ದಿಕ್ಕಿನಲ್ಲಿ ತಳ್ಳುತ್ತದೆ ಮತ್ತು ಇದು ಕ್ರಾಫ್ಟ್ ಅನ್ನು ನಿಧಾನಗೊಳಿಸುತ್ತದೆ.
ಜುಲೈ 14 ರಂದು ಚಂದ್ರಯಾನ – 3 ಬಾಹ್ಯಾಕಾಶ ನೌಕೆಯನ್ನು ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿತ್ತು. ಭೂಮಿಯ ಕಕ್ಷೆಯನ್ನು 5 ಬಾರಿ ಸುತ್ತು ಹಾಕಿದ ಇದು, ನಿಧಾನವಾಗಿ ಭೂಮಿಯ ಗುರುತ್ವಾಕರ್ಷಣೆಯಿಂದ ದೂರ ಸಾಗಿ ಚಂದ್ರನ ಗುರುತ್ವಾಕರ್ಷಣೆ ವಲಯದ ಚಂದ್ರನ ಕಕ್ಷೆ ಸೇರಿತ್ತು. ಆಗಸ್ಟ್ 1 ರಂದು ನೌಕೆಯು ಚಂದ್ರನ ಗುರುತ್ವಾಕರ್ಷಣೆಯ ಪ್ರಭಾ ವಲಯದ ಕ್ಷಕೆ ಕಡೆ ಸಾಗಿತು. ಚಂದ್ರನ ಕಕ್ಷೆಗೆ ಆಗಸ್ಟ್ 5 ರಂದು ಸೇರ್ಪಡೆಯಾದ ಬಳಿಕ ಚಂದ್ರನನ್ನು ಸುತ್ತು ಹಾಕುತ್ತಿರುವ ಚಂದ್ರಯಾನ – 3 ಈಗ ನಿಧಾನವಾಗಿ ಚಂದ್ರನ ಸಮೀಪ ಸಾಗುತ್ತಿದೆ.
ಮುಂದಿನ ಹಂತದಲ್ಲಿ ವಿಕ್ರಂ ಲ್ಯಾಂಡರ್ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟು ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ. ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವ ಸವಾಲನ್ನು ಸಮರ್ಥವಾಗಿ ಎದುರಿಸಲು ಇಸ್ರೋ ಸಿದ್ಧತೆ ನಡೆಸುತ್ತಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ಬಳಿಕ ಅದರೊಳಗಿನಿಂದ ಪ್ರಗ್ಯಾನ್ ರೋವರ್ ಅದರಿಂದ ಹೊರಗೆ ಬರಲಿದೆ. ಚಂದ್ರನ ಅಂಗಳದಲ್ಲಿ ಸುತ್ತಾಟ ನಡೆಸಲಿರುವ ರೋವರ್, ಹಲವು ಮಹತ್ವದ ವೈಜ್ಞಾನಿಕ ಮಾಹಿತಿಗಳನ್ನು ಕಲೆ ಹಾಕಲಿದೆ.
ಚಂದ್ರಯಾನ – 2 ಯೋಜನೆಯನ್ನೇ ಸುಧಾರಣೆಗೊಳಿಸಿ ಚಂದ್ರಯಾನ 3 ಯೋಜನೆ ರೂಪಿಸಲಾಗಿದೆ. 4 ವರ್ಷಗಳ ಹಿಂದೆ ಚಂದ್ರನತ್ತ ತೆರಳಿದ್ದ ಚಂದ್ರಯಾನ – 2 ಬಾಹ್ಯಾಕಾಶ ನೌಕೆ, ಚಂದ್ರನ ನೆಲದಲ್ಲಿ ವಿಕ್ರಂ ಲ್ಯಾಂಡರ್ ಅನ್ನು ಇಳಿಸುವಾಗ ಕೊನೆಯ ಹಂತದಲ್ಲಿ ವಿಫಲವಾಗಿತ್ತು. ವಿಕ್ರಂ ಲ್ಯಾಂಡರ್ ಚಂದ್ರನ ನೆಲಕ್ಕೆ ನಿಧಾನವಾಗಿ ಇಳಿಯುವ ಬದಲು ಅಪ್ಪಳಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ