2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಸಿಗುವುದೇ ಹ್ಯಾಟ್ರಿಕ್‌ ಗೆಲುವು…? ಟೈಮ್ಸ್ ನೌ -ಇಟಿಜಿ ನಡೆಸಿದ ಸಮೀಕ್ಷೆ ಏನು ಹೇಳುತ್ತದೆ..?

2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ ಎಂದು ಟೈಮ್ಸ್ ನೌ-ಇಟಿಜಿ ಸಮೀಕ್ಷೆ ಭವಿಷ್ಯ ನುಡಿದಿದೆ. ಆ ಮೂಲಕ ಪಂಡಿತ್ ನೆಹರೂ ನಂತರ ಸತತ ಮೂರು ಬಾರಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ಹೇಳುತ್ತಿರುವ ಹೊತ್ತಿನಲ್ಲಿ ಈ ಸಮೀಕ್ಷಾ ವರದಿ ಬಂದಿದೆ. ವಾಸ್ತವವಾಗಿ, ಅವರು ಜನರಿಗೆ ನೀಡಿದ ಭರವಸೆಗಳ ಪ್ರಗತಿಯನ್ನು ವಿವರಿಸಲು ಮುಂದಿನ ವರ್ಷ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದೇನೆ ಎಂದು ಅವರು ಸ್ವಾತಂತ್ರ್ಯೋತ್ಸವದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೈಮ್ಸ್ ನೌ-ಇಟಿಜಿ ಸಮೀಕ್ಷೆಯ ಪ್ರಕಾರ, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮತ್ತು ವಿಪಕ್ಷಗಳ ಮೈತ್ರಿಕೂಟ-ಇಂಡಿಯಾ 160-190 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಎನ್‌ಡಿಎ ಸುಮಾರು 296 ಮತ್ತು 326 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತದೆ. ಬಿಜೆಪಿ ನೇತೃತ್ವದ ಮೈತ್ರಿಕೂಟವು 2019 ರಲ್ಲಿ 353 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳನ್ನು ಎದುರಿಸಲು 26 ವಿರೋಧ ಪಕ್ಷಗಳು ಕೈಜೋಡಿಸಿದ್ದರೂ NDA ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಕಂಡುಬರುತ್ತದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯು ಹಿಂದಿ ಬೆಲ್ಟ್‌ನಲ್ಲಿ 80%ರಷ್ಟು ಯಶಸ್ಸಿನೊಂದಿಗೆ ಎನ್‌ಡಿಎ (NDA) ತನ್ನ ಪ್ರಬಲ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತದೆ ಎಂದು ಊಹಿಸುತ್ತದೆ. ಇದು ಉತ್ತರ ಭಾರತದಾದ್ಯಂತ ಮೋದಿ ಅಲೆಯ ನಿರಂತರ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಗಮನಾರ್ಹ ಗೆಲುವು ಸಾಧಿಸುವ ನಿರೀಕ್ಷೆಯಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಇಟಿಜಿ ಸಮೀಕ್ಷೆಯ ಪ್ರಕಾರ, ಈ ರಾಜ್ಯಗಳಲ್ಲಿ ಲಭ್ಯವಿರುವ 80 ಸ್ಥಾನಗಳಲ್ಲಿ ಎನ್‌ಡಿಎ ಸುಮಾರು 70 ಸ್ಥಾನಗಳನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ.
ಬಿಹಾರದಲ್ಲಿ ಎನ್‌ಡಿಎ 22-24 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದ್ದು, ವಿಪಕ್ಷಗಳ ಮೈತ್ರಿಕೂಟ-ಇಂಡಿಯಾ 16-18 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಆದರೆ, ವಿರೋಧ ಪಕ್ಷಗಳು ತಮಿಳುನಾಡು ಮತ್ತು ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಲಿವೆ ಎಂದು ಹೇಳಿದೆ. ಆದಾಗ್ಯೂ, ತೆಲಂಗಾಣ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ವಿಪಕ್ಷಗಳ ಆಂತರಿಕ ಬಿರುಕುಗಳು ನಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ. ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ 30-34 (ಶೇ. 57.2) ಗೆಲ್ಲುವ ನಿರೀಕ್ಷೆಯಿದ್ದು, ಎಐಎಡಿಎಂಕೆ-ಎನ್‌ಡಿಎ ಮೈತ್ರಿಕೂಟ ಶೇ.27.8ರಷ್ಟು ಮತಗಳಿಕೆಯೊಂದಿಗೆ 4-8 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಆದರೆ, ಇತ್ತೀಚಿನ ರಾಜ್ಯಗಳ ಚುನಾವಣೆಯಲ್ಲಿ ಗೆದ್ದರೂ ಕಾಂಗ್ರೆಸ್ 8-10 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿ 18-20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ನಿಂದ ಕೇವಲ ಓರ್ವ ಸಂಸದ ಮತ್ತು ಜೆಡಿಎಸ್ 1 ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಗೆಲುವು ಸಾಧಿಸಿದ್ದರು.
ಆದರೆ ಟೈಮ್ಸ್ ನೌ-ಇಟಿಜಿ ಸಮೀಕ್ಷೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 18 ರಿಂದ 20 ಸ್ಥಾನಗಳಿಸಬಹುದು ಎಂದು ಹೇಳಿದೆ. ಹಾಗೂ ಮೂರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಕಾಂಗ್ರೆಸ್‌ ಮೈತ್ರಿ ಕೂಟ 8 -10 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯ ಲೆಕ್ಕಾಚಾರಗಳನ್ನು ಶೇಕಡಾವಾರು ಪ್ರಮಾಣದಲ್ಲಿ ಹೇಳುವುದಾದರೆ ಎನ್‌ಡಿಎ ಶೇ. 55 ರಷ್ಟು ಮತ ಗಳಿಕೆ ಮಾಡಬಹುದು ಎಂದು ಸಮೀಕ್ಷೆ ಅಂದಾಜಿದೆ. ಇಂಡಿಯಾ ಮೈತ್ರಿ ಕೂಟದ ಮತ ಗಳಿಕೆ ಪ್ರಮಾಣ ಶೇ. 36 ಇರಬಹುದು. ಇತರರು ಶೇ. 9ರಷ್ಟು ಮತ ಗಳಿಸುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ಹೇಳಿದೆ.
ಚುನಾವಣೆಗೆ ಇನ್ನೂ 8 ತಿಂಗಳ ಸಮಯವಿದೆ. ಹೀಗಾಗಿ ಸನ್ನಿವೇಶಗಳು ಹೀಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ರಾಜಕೀಯ ಹಾಗೂ ಇನ್ನಿತರ ವಿದ್ಯಮಾನಗಳು ಮತದಾರರ ಮೇಲೆ ಪರಿಣಾಮ ಬೀರಬಹುದಾಗಿದೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

4 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement