ಕಾವೇರಿ ನದಿ ನೀರು ವಿವಾದ : ಆಗಸ್ಟ್ 25 ರಂದು ಸುಪ್ರೀಂ ಕೋರ್ಟಿನಲ್ಲಿ ತಮಿಳುನಾಡು ಅರ್ಜಿ ವಿಚಾರಣೆ

ನವದೆಹಲಿ: ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠ ರಚಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ, ಬಿ.ಆರ್‌. ಗವಾಯಿ ಮತ್ತು ಪ್ರಶಾಂತ ಮಿಶ್ರಾ ಅವರನ್ನೊಳಗೊಂಡ ಪೀಠವು ಆಗಸ್ಟ್‌ 25 ರಂದು ತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆ ನಡೆಸಲಿದೆ.
ಬೆಳೆದು ನಿಂತಿರುವ ಬೆಳೆಯ ಪೋಷಣೆಗಾಗಿ ಈ ತಿಂಗಳ ಅಂತ್ಯದವರೆಗೆ ನಿತ್ಯ 24,000 ಕ್ಯೂಸೆಕ್ ನೀರನ್ನು ಕರ್ನಾಟಕದ ಅಣೆಕಟ್ಟೆಗಳಿಂದ ಹರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ ಕೋರಿದೆ.
ನ್ಯಾಯ ಮಂಡಳಿ ಆದೇಶಿಸಿರುವಂತೆ ಮತ್ತು ಆ ಆದೇಶವನ್ನು ಸುಪ್ರೀಂ ಕೋರ್ಟ್‌ ಮಾರ್ಪಾಡು ಮಾಡಿರುವಂತೆ ಸೆಪ್ಟೆಂಬರ್‌ ತಿಂಗಳಲ್ಲಿ 36.76 ಟಿಎಂಸಿ ಅಡಿ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕು. ಪ್ರಸಕ್ತ ನೀರಾವರಿ ವರ್ಷದಲ್ಲಿ 01.06.2023 ರಿಂದ 31.07.2023ರವರೆಗಿನ 28.849 ಟಿಎಂಸಿ ಅಡಿ ನೀರಿನ ಕೊರತೆಯನ್ನು ಭರಿಸಲು ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು ಮನವಿ ಮಾಡಿದೆ.

ತಮಿಳುನಾಡಿಗೆ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಆದೇಶ ಪಾಲಿಸುವಂತೆ ಸೂಚಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲುಎಂಎ) ಆದೇಶಿಸಬೇಕು ಎಂದು ಕೋರಲಾಗಿದೆ.
ಆಗಸ್ಟ್‌ 11ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲುಎಂಎ) ಸಭೆಯಲ್ಲಿ ಕರ್ನಾಟಕವು ತಮಿಳುನಾಡು ಸರ್ಕಾರದ ಕೋರಿಕೆಯಂತೆ 15,000 ಕ್ಯೂಸೆಕ್‌ ನೀರು ಬಿಡುಗಡೆ ಅಸಾಧ್ಯ ಎಂದು ಹೇಳಿದ್ದು, 8,000 ಕ್ಯೂಸೆಕ್‌ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿತ್ತು. ಈ ಸಂಬಂಧ ತಮಿಳುನಾಡಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಗಂಭೀರ ಆಕ್ಷೇಪಣೆ ಎತ್ತಿದ್ದರು. ಆದರೆ, ಸಿಡಬ್ಲುಎಂಎಯು ಸ್ವೇಚ್ಛೆಯಿಂದ ಕೆಅರ್‌ಎಸ್‌ ಮತ್ತು ಕಬಿನಿಯಿಂದ ಒಟ್ಟು 10000 ಕ್ಯೂಸೆಕ್‌ ನೀರನ್ನು ಆಗಸ್ಟ್‌ 12ರಿಂದ ಮುಂದಿನ 15 ದಿನಗಳವರೆಗೆ ಬಿಡುಗಡೆ ಮಾಡುವಂತೆ ಆದೇಶಿಸಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಮೆಟ್ಟೂರು ಜಲಾಶಯವನ್ನು ನಂಬಿ 4.913 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ವ್ಯವಸಾಯ ಮಾಡಲಾಗುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಸಕ್ತ ಮಾನ್ಸೂನ್‌ನಲ್ಲಿ ಕುರುವೈ ಫಸಲು ಮಾಡಲಾಗಿದೆ. ಹೀಗಾಗಿ, ನೈರುತ್ಯ ಮಾನ್ಸೂನ್‌ ವೇಳೆಗೆ ಮೆಟ್ಟೂರು ಜಲಾಶಯದಿಂದ ನೀರು ಬಿಡುಗಡೆ ಅತಿಮುಖ್ಯವಾಗಿದೆ. 40 ಲಕ್ಷ ರೈತರು ಮತ್ತು 1 ಕೋಟಿ ಕಾರ್ಮಿಕರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮೆಟ್ಟೂರು ಜಲಾಶಯವನ್ನು ಜೀವನಕ್ಕಾಗಿ ಆಧರಿಸಿದ್ದಾರೆ. ಹೀಗಾಗಿ, ನೀರಿನ ಕೊರತೆಯು ಕೃಷಿ ಉತ್ಪಾದನೆಗೆ ಹೊಡೆತ ನೀಡಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದ ಲೋಕಸಭೆ ಚುನಾವಣೆ 2ನೇ ಹಂತದಲ್ಲಿ ಶೇ.70.03 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ? ಇಲ್ಲಿದೆ ವಿವರ..

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement