ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡುವುದರೊಂದಿಗೆ ಯೂ ಟ್ಯೂಬ್‌ನಲ್ಲಿ ವೀಕ್ಷಣೆಯಲ್ಲೂ ‘ಇಸ್ರೋ’ ಹೊಸ ಮೈಲುಗಲ್ಲು ದಾಖಲಿಸಿದೆ.
ಸುಮಾರು 80 ಲಕ್ಷ ಜನರು ಇಸ್ರೋವಿನ ಅಧಿಕೃತ ಯೂಟ್ಯೂಬ್ ಚಾನೆಲ್‌ನ ನೇರಪ್ರಸಾರವನ್ನು ವೀಕ್ಷಿಸುವ ಮೂಲಕ ‘ಇಸ್ರೋ’ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಯೂಟ್ಯೂಬ್‌ನ ಇತಿಹಾಸದಲ್ಲಿ ನೇರಪ್ರಸಾರವನ್ನು 80 ಲಕ್ಷ ಜನ ವೀಕ್ಷಿಸಿದ್ದು, ಇದೇ ಮೊದಲು ಎಂದು ವರದಿಯಾಗಿದೆ.
ಈ ಬಗ್ಗೆ ಮುಫದ್ದಲ್ ವೋಹ್ರಾ ಎಂಬವರು ಟ್ವೀಟ್ ಮಾಡಿದ್ದು, ‘ಇಸ್ರೋದ ಯೂಟ್ಯೂಬ್ ಚಾನೆಲ್‌ನಲ್ಲಿ 8M(80 ಲಕ್ಷ) ಚಂದ್ರನ ಮೇಲೆ ಇಳಿಯುತ್ತಿರುವ ದೃಶ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದ್ದಾರೆ. ಇದು ಯೂಟ್ಯೂಬ್‌ನ ‘ಲೈವ್ ಇತಿಹಾಸದಲ್ಲಿ ಅತ್ಯಧಿಕ ಗರಿಷ್ಠ ವೀಕ್ಷಕರ ದಾಖಲೆಯಾಗಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮೊದಲು ಸ್ಪ್ಯಾನಿಷ್ ಸ್ಟ್ರೀಮರ್ ಇಬಾಯ್ ಅವರ 34 ಲಕ್ಷ ವೀಕ್ಷಕರ ವಿಶ್ವ ದಾಖಲೆಯನ್ನು ಇಸ್ರೋ ಮುರಿದಿದೆ ಎಂದು ಇನ್ನೊಂದು ವರದಿ ತಿಳಿಸಿದೆ.
ಕಳೆದ ಜುಲೈ 14ರಂದು ಆಂಧ್ರದ ಶ್ರೀಹರಿ ಕೋಟಾದಿಂದ ಉಡಾವಣೆ ಮಾಡಿದ್ದ ಚಂದ್ರಯಾನ-3 ನೌಕೆಯ ‘ವಿಕ್ರಮ್ ಲ್ಯಾಂಡರ್’ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ಆ ಮೂಲಕ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ.
ಸಂಜೆ 6:03ಕ್ಕೆ ‘ವಿಕ್ರಮ್ ಲ್ಯಾಂಡರ್’ ಅನ್ನು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿಯುವ ಮೂಲಕ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ