ಮೈಸೂರು: ಗೃಹಲಕ್ಷ್ಮೀ ಯೋಜನೆ ಚಾಲನೆ, ಮನೆ ಯಜಮಾನಿಗೆ ಖಾತೆಗೆ 2 ಸಾವಿರ ರೂ. ಜಮೆ

ಮೈಸೂರು: ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಗೃಹಲಕ್ಷ್ಮೀ ಯೋಜನೆಗೆ ಬುಧವಾರ ಅದ್ದೂರಿ ಚಾಲನೆ ನೀಡಲಾಯಿತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ಮನೆ ಯಜಮಾನಿ ಖಾತೆಗೆ 2000 ರೂಪಾಯಿ ಹಣ ಜಮೆಯಾಗಿದೆ.
ಬಳಿಕ ಮಾತನಾಡಿದ ರಾಹುಲ್‌ ಗಾಂಧಿ ಅವರು, ನಾವು ಯಾವತ್ತೂ ಸುಳ್ಳು ಆಶ್ವಾಸನೆ ನೀಡುವುದಿಲ್ಲ. ನಮಗೆ ಕೆಲಸ ಮಾಡಲು ಸಾಧ್ಯವಿದ್ದರೆ ಅದನ್ನು ಖಂಡಿತಾ ಮಾಡುತ್ತೇವೆ. ನಾವು ಯಾವತ್ತೂ ಸುಳ್ಳು ಹೇಳುವುದಿಲ್ಲ. ಸುಳ್ಳು ಆಶ್ವಾಸನೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್​ನ 100 ದಿನಗಳ ಯಶಸ್ವಿ ಪುಸ್ತಕ ಬಿಡುಗಡೆ ಮಾಡಿದರು.
ರಾಜ್ಯದ ಅಭಿವೃದ್ಧಿ ಮಹಿಳೆಯರಿಂದ ಆಗಿದೆ. ಗೃಹಲಕ್ಷ್ಮಿ ಯೋಜನೆ ಅದು ಜನರ ಯೋಜನೆ. ಈ ಯೋಜನೆ ರೂಪಿಸಿರುವುದು ಯಾವುದೇ ಥಿಂಕ್ ಟ್ಯಾಂಕರ್ಸ್ ಗಳಲ್ಲ, ಜನರಿಂದಲೇ ಜನರಿಗಾಗಿ ರೂಪಿತಗೊಂಡ ಯೋಜನೆ ಇದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ನಾವು ಬಡವರ ಪರವಾದ, ಮಧ್ಯಮ ವರ್ಗದವರ ಪರವಾದ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ ನಾಯಕರು ಇನ್ನಿಲ್ಲದ ಆರೋಪಗಳನ್ನು ಮಾಡಿದರು. ಸ್ವತಃ ಪ್ರಧಾನಿ ಮೋದಿಯವರೇ ರಾಜ್ಯ ದಿವಾಳಿಯಾಗುತ್ತದೆ ಎಂದು ಭಾಷಣ ಮಾಡಿದರು. ಆದರೆ, ಈಗ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಪ್ರತಿದಿನ ಕೋಟಿಗೂ ಅಧಿಕ ಮಂದಿ ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರ ಮಾತುಗಳು ಸುಳ್ಳಾಗಿವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

ನೂರು ದಿನಗಳ ಸಾಧನೆಯ ಪುಸ್ತಕ ಹೊರ ತಂದಿದ್ದೇವೆ. ಈ ಪುಸ್ತಕವನ್ನು ಮತ್ತು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ಪಟ್ಟಿ ಮಾಡಿ ನೋಡಿ. “ನುಡಿದಂತೆ ನಡೆದಿದ್ದೇವೆ. ಭಾರತದ ರಾಜಕೀಯ ಇತಿಹಾಸದಲ್ಲೇ ಒಂದೇ ಯೋಜನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಜನೋಪಯೋಗಿ ಕಾರ್ಯಕ್ರಮ ಜಾರಿ ಆಗಿಲ್ಲ. ಶಕ್ತಿಯೋಜನೆಯಿಂದ 48.5 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಅವರಿಗೆಲ್ಲಾ ಸಾವಿರಾರು ರೂಪಾಯಿ ಬಸ್ ಚಾರ್ಜ್ ಉಳಿತಾಯವಾಗಿದೆ. ಅನ್ನಭಾಗ್ಯಕ್ಕೆ ಉಚಿತ ಅಕ್ಕಿ ಕೊಡಲು ಅಕ್ಕಿ ಕೊಡದೆ ಕೇಂದ್ರ ಸರ್ಕಾರ ನಮಗೆ ವಂಚಿಸಿತು. ನಾವು ಅಕ್ಕಿಯ ಬದಲಿಗೆ ಹಣ ಕೊಟ್ಟೆವು ಎಂದು ಹೇಳಿದರು.
ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಸಚಿವರಾದ ಡಾ.ಜಿ.ಪರಮೇಶ್ವರ, ಡಾ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ವೆಂಕಟೇಶ, ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ ಮೊದಲಾದವರಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement