ನವದೆಹಲಿ : ಮುಂದಿನ ವಾರ ಚಂದ್ರನ ರಾತ್ರಿ (14 ಭೂಮಿಯ ದಿನಗಳು) ಮುಗಿಯುವ ಮೊದಲು ವೈಜ್ಞಾನಿಕ ಪ್ರಯೋಗಗಳನ್ನು ಪೂರ್ಣಗೊಳಿಸಲು ಚಂದ್ರಯಾನ-3ರ ಪ್ರಗ್ಯಾನ್ ರೋವರ್ ಪ್ರಯತ್ನಿಸುತ್ತಿದೆ. ಈ ಕುರಿತು ಇಸ್ರೋ ಪ್ರತಿದಿನ ಆಸಕ್ತಿದಾಯಕ ನವೀಕರಣವನ್ನ ಹಂಚಿಕೊಳ್ಳುತ್ತಿದೆ. ಇದೀಗ ಅದು ವಿಶೇಷ ವಿಡಿಯೋ ಬಿಡುಗಡೆ ಮಾಡಿದ್ದು, ಚಂದ್ರನ ಮೇಲ್ಮೈಯಲ್ಲಿ ರೋವರ್ ಸುರಕ್ಷಿತ ದಾರಿ ಹುಡುಕಾಟದ ವೇಳೆ ಸುತ್ತುಹೊಡೆಯುತ್ತಿರುವ ವೀಡಿಯೊವೊಂದನ್ನು ಅದು ʼಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
“ಸುರಕ್ಷಿತ ಮಾರ್ಗದ ಹುಡುಕಾಟದಲ್ಲಿ ರೋವರ್ ತಿರುಗುತ್ತಿದೆ. ತಿರುಗುವಿಕೆಯನ್ನು ಲ್ಯಾಂಡರ್ ಇಮೇಜರ್ ಕ್ಯಾಮೆರಾ ಮೂಲಕ ಸೆರೆಹಿಡಿಯಲಾಗಿದೆ” ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ.
ವೀಡಿಯೋದಲ್ಲಿ ಪ್ರಗ್ಯಾನ್ ರೋವರ್ 360 ಡಿಗ್ರಿ ಕೋನದಲ್ಲಿ ತಿರುಗುತ್ತಿರುವುದನ್ನ ಕಾಣಬಹುದು. ಸುರಕ್ಷಿತ ಮಾರ್ಗವನ್ನ ಹುಡುಕುವಾಗ ಹಿಂದಕ್ಕೆ ಮುಂದಕ್ಕೆ ಚಲಿಸುವುದನ್ನೂ ಕಾಣಬಹುದು. ಅದರಲ್ಲಿ ರೋವರ್ ನೃತ್ಯ ಮಾಡುತ್ತಿರುವಂತೆ ತೋರುತ್ತದೆ.
ಈ ವೀಡಿಯೊಕ್ಕೆ ಇಸ್ರೋ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದೆ. ರೋವರ್ ಸುತ್ತುತ್ತಿರುವುದನ್ನು ನೋಡಿದರೆ ಪುಟ್ಟ ಹುಡುಗ ಚಂದ್ರನ ಮೇಲೆ ಆಟವಾಡುತ್ತಿರುವಂತೆ ಕಾಣುತ್ತದೆ ಎಂದು ಅದು ಟ್ವೀಟ್ ಮಾಡಿದೆ. ಚಂದಮಾಮದ ಅಂಗಳದಲ್ಲಿ ಮಗು ತಮಾಷೆಯಾಗಿ ಕುಣಿದಾಡುತ್ತಿರುವಂತೆ ಭಾಸವಾಗುತ್ತಿದೆ, ತಾಯಿ ಪ್ರೀತಿಯಿಂದ ನೋಡುತ್ತಾಳೆ…” ಎಂದು ಇಸ್ರೋ ಅದಕ್ಕೆ ಟಿಪ್ಪಣಿ ಬರೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ